Friday 24 February 2012

ಆರೋಪ ನಿರಾಧಾರ


ಆರೋಪ ನಿರಾಧಾರ !
ಅ0ದುಕೊಂಡರೇ?
ಕಾಣದ ಲೋಕದಲ್ಲಿ ಮರೆಯಾದ
ಸಾವಿನ ಮನೆಯ ಅತಿಥಿಯಾದ
ಗಾಂಧಿ!
ನುಡಿದದ್ದು, ನಡೆದದ್ದು ಸತ್ಯ

ಭೋದಿಸಿದ ಸಿದ್ಧಾಂತಗಳ ಪಾಲಿಸಿದವರು
ಜವರಾಯನ ಮುಂದೆ ತಲೆತಗ್ಗಿಸಿ ಕುಳಿತರು!
ನೋಡು, ಲಾಭಕ್ಕಾಗಿ ನಡೆಯುವ ಆಟ
ಸತ್ಯಕ್ಕಾಗಿ ನಿನ್ನ ಚಿಂತನೆಗಳ ಪರದಾಟ

ಅಂದು ಬರಿಮೈಯಲ್ಲಿ ಉಸುರಿದ ಸತ್ಯಗಳು
ಖಾದಿ ಮೈಯಲ್ಲಿ ಮೈಲಿಗೆಯಾಗಿವೆ ಇಂದು
ತಿಕ್ಕಾಟ, ಹೊಡೆದಾಟದ ಕುಲುಮೆಯಲಿ ಬೆಂದು
ಅಸ್ಪಷ್ಟ ಹತಾರೆಗಳು ಕಳ್ಳಸುಳ್ಳರು ಬಂದು

ಪಾಲಿಸದ ಸಿದ್ಧಾಂತಗಳ ಮುಸುಕ ತೆಗೆಯದೆ
ತಿರುಚಿದರು, ತೀಡಿದರು ಸತ್ಯ ಬಯಸದೆ
ಹೊಯ್ದದ್ದೇ ಎರಕ, ಎಳೆದಷ್ಟು ಆಕಾರ
ಸತ್ಯಶೋಧನೆಯ ವಿಚಾರಗಳಿಂದು ನಿರಾಕಾರ

ಗಲ್ಲಿಗಲ್ಲಿಗಳಲ್ಲಿ ನಿನ್ನದೇ ಸ್ಮರಣೆ
ಉಪವಾಸ, ವನವಾಸಕ್ಕೆ ಹಿನ್ನಲೆ ನೀನೆ
ನೀನು ಹಸಿದದ್ದು ಹಿಂಡಿ ಕರುಳ ಬೇನೆ
ಭ್ರಷ್ಟ ಭಕ್ಷಕರಿಂದ ಅವರದ್ದೇ ವರ್ಣನೆ

ಯಮನ ಅಟ್ಟಹಾಸದ ಮುಂದೆ
ನಲುಗಿತೇ ನಿನ್ನ ದನಿ?
ಇಲ್ಲವಾದರೆ ಪಾಲಿಸುವವರು
ನಿನ್ನ ಸಿದ್ಧಾಂತದ ಒಂದು ಹನಿ

ನಿನ್ನ ಮರೆತು ಹರಿಸಿದರು ನೆತ್ತರು
ದ್ವೇಷ ಛಾಯೆ ಮೂಡಿ ಮನುಜರನ್ನು ಸುಟ್ಟರು
ಕೊನೆಗೆ ಸೌಹಾರ್ದತೆಯ ವೇಷಧರಿಸಿ ಅತ್ತರು
ನಿನಗನಿಸಿರಬಹುದಲ್ಲವೇ? ಅವರೆಲ್ಲ ಹುಚ್ಚರು!

ನಿನಗಂತೂ ಗೊಂದಲ, ತುಸು ಜವರಾಯನಿಗೆ!
ಬದಲಾದವೇ ಸಿದ್ಧಾಂತಗಳು? ತಾಳೆ ನೋಡಿ ಹಿಂದಿನವುಗಳೊಂದಿಗೆ
ಪ್ರಶ್ನಿಸೋಣವೇ? ಕೇಳಲು ಜವರಾಯ! ಕೋರ್ಟು ಹೇಳಿತು
ನೀನಿಲ್ಲದೆ, ಸಾಕ್ಷಿರಹಿತ ಆರೋಪ ನಿರಾಧಾರ!