Tuesday 28 January 2020

'ಆಮ್ಚೆಂ ಸಂವಿಧಾನ್ ಆಮ್ಚಿಂ ಹಕ್ಕಾಂ': ವಿಶ್ಲೇಷಣೆ, ಪ್ರಶ್ನೋತ್ತರವಿರುವ ಕೊಂಕಣಿಯ ಚೊಚ್ಚಲ ಕೃತಿ


ಕಾನೂನಿನ ಅಧ್ಯಯನವು ಕೇವಲ ಕಾನೂನಿನ ವಿದ್ಯಾರ್ಥಿಗಳು, ವಕೀಲರು ಮತ್ತು ಸರಕಾರಿ ನೌಕರರಿಗೆ ಮಾತ್ರ ಅಗತ್ಯ. ಅದರಲ್ಲೂ ಸಂವಿಧಾನದ ಓದು ಪಠ್ಯ ಪುಸ್ತಕ, ರಾಜ್ಯಶಾಸ್ತ್ರ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ ಸೀಮಿತ ಎಂಬ ಮನೊಭಾವ ಹೆಚ್ಚಾಗಿದೆ. ಸಂವಿಧಾನದ  ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮಾತ್ರ ನೆನಪಾಗುವುದು ಇದಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಅಲ್ಲಲ್ಲಿ ಏರ್ಪಡಿಸುವುದನ್ನು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಡ್ವರ್ಡ್ ಲಾರ್ಸನ್ ಡಿ'ಸೋಜಾ, ಪೇತ್ರಿ  ಇವರು ಕೊಂಕಣಿ ಭಾಷೆಯಲ್ಲಿ ರಚಿಸಿದ 'ಆಮ್ಚೆಂ ಸಂವಿಧಾನ್ ಆಮ್ಚಿಂ ಹಕ್ಕಾಂ'  ಪ್ರಕಟಗೊಂಡಿದೆ.

ಕೊಂಕಣಿ ಭಾಷೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ಸಭಾವು ಪ್ರಕಟಿಸಿದ ಭಾರತದ  ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ ವಿಶ್ಲೇಷಣೆ ಮತ್ತು ಪ್ರಶ್ನೊತ್ತರವನ್ನೊಳಗೊಂಡ ಮೊದಲ ಕೃತಿ ಇದಾಗಿದೆ. ಈ ಹಿಂದೆ ಕೊಂಕಣಿಯಲ್ಲಿ ಸಂವಿಧಾನದ  ನೇರ ಅನುವಾದದ ಕೃತಿ ಬಂದಿದ್ದರೂ, ವಿಶ್ಲೇಷಣೆ, ಪ್ರಶ್ನೋತ್ತರ ವಿರುವ ಮೊದಲ ಸರಳ ಕೊಂಕಣಿ ಕೃತಿ ಇದು. ಸಂವಿಧಾನದ ವಿಷಯ  ವಿಸ್ತಾರವನ್ನು ತಿಳಿದಿರುವವರಿಗೆ, ಅದರಲ್ಲಿನ ಪ್ರಮುಖ ಅಂಶಗಳನ್ನು ಆಯ್ಕೆ ಮಾಡಿ ತಾಂತ್ರಿಕ ಶಬ್ದಗಳ ಕೊರತೆ ಇರುವ ಭಾಷೆಯಲ್ಲಿ ಕೃತಿ ರೂಪಕ್ಕಿಳಿಸುವುದು ಸವಾಲಿನ ಕೆಲಸವೆ ಆಗಿದೆ. ಹೀಗಿರುವಾಗ ಲೇಖಕರು ತಮ್ಮ ವೃತ್ತಿಪರ ಅಧ್ಯಯನ ಮತ್ತು ೧೮ ವರ್ಷಗಳ ಭೊಧನಾ ಅನುಭವದಿಂದ ಸಂವಿಧಾನದ ಪ್ರಮುಖ ಅಂಶಗಳನ್ನು ಸರಳ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಸಂವಿಧಾನ ಎಂದರೇನು? ಸಂವಿಧಾನದ ರಚನೆ ಹೇಗೆ ನಡೆಯುತ್ತದೆ? ಎಂಬಲ್ಲಿಂದ ಆರಂಭಗೊಂಡ ಕೃತಿಯು ನಮ್ಮ ದೇಶದ ಸಂವಿಧಾನದ ರಚನೆ, ಪೀಠಿಕೆ, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ರಾಜ್ಯನಿರ್ದೇಶನಾತ್ಮಕ ತತ್ವಗಳು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಮಗ್ರ ಮತ್ತು ಸಂಕ್ಷಿಪ್ತ ಮಾಹಿತಿ ನೀಡುತ್ತದೆ. ಸಮಾಜದ ವಿವಿಧ ವರ್ಗಗಳಾದ ದಲಿತ, ಹಿಂದುಳಿದ, ಮಹಿಳೆಯರು, ಮಕ್ಕಳು, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಸಂವಿಧಾನವು ಕೈಗೊಂಡ ಕ್ರಮಗಳನ್ನು ತಿಳಿಸುವ ಪ್ರಯತ್ನ ಮಾಡುತ್ತದೆ.

ಸಂವಿಧಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಾದ ದೋಷಾರೋಪಣೆ/ಮಹಾಭಿಯೋಗ, ನ್ಯಾಯಿಕ ವಿಮರ್ಶೆ ಮುಂತಾದ ಅಂಶಗಳನ್ನು ಓದುಗರಿಗೆ ಅರ್ಥವಾಗುವಂತೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಪೂರಕ ಮಾಹಿತಿಗಳು ಉಪಯೋಗಕಾರಿಯಾಗಿವೆ.

ಪ್ರಶ್ನಾಕೋಶದ ಮೂಲಕ ಓದುಗರಿಗೆ ಸಂವಿಧಾನದ ಮೇಲ್ನೋಟವನ್ನು ಪಡೆಯಬಹುದು. ಸಂವಿಧಾನವು ಕ್ಲಿಷ್ಟಕರವಾದ ವಿಷಯ, ಕೊಂಕಣಿ ಭಾಷೆಯಲ್ಲಿ ಸಂವಿಧಾನಾತ್ಮಕ ಶಬ್ದ ಭಂಡಾರದ ಸೀಮಿತ ಆಯ್ಕೆಯಲ್ಲೂ ಕೂಡ ಲೇಖಕರು ತಮ್ಮ ಅನುಭವದೊಂದಿಗೆ ಶ್ರೀಸಾಮಾನ್ಯನಿಗೆ ಆಸಕ್ತಿಯುತವಾಗುವಂತೆ ಕೃತಿಯನ್ನು ರಚಿಸುವಲ್ಲಿ ಸಫಲರಾಗಿದ್ದಾರೆ. ಕೊಂಕಣಿ ಭಾಷೆಯಲ್ಲಿ ಸಂವಿಧಾನದ ಮಾಹಿತಿಯ ಕೃತಿಯ ಕೊರತೆಯನ್ನು ನೀಗಿಸುವಲ್ಲಿ ಇದೊಂದು ಉತ್ತಮ ಪ್ರಯತ್ನ. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಇವರು ಪ್ರಕಟಿಸಿದ ೧೧೨  ಪುಟಗಳ ಈ ಕೃತಿಗೆ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್  ಐಸಾಕ್ ಲೋಬೊ ಮುನ್ನುಡಿ ಬರೆದಿದ್ದಾರೆ. ಆಮ್ಚೊ ಸಂದೇಶ್ ಪತ್ರಿಕೆಯ ಸಂಪಾದಕರಾದ ವಿಲ್ಪ್ರೆಡ್ ಲೋಬೊ ಪಡೀಲ್ ಅಭಿಪ್ರಾಯ ಪಟ್ಟಿರುವಂತೆ "ಈ ಕೃತಿಯು ಶ್ರಿಸಾಮಾನ್ಯನಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಆಶಾಕಿರಣವಾಗಿದೆ".

ಕೃತಿಯ ಕರ್ತೃ ಎಡ್ವರ್ಡ್ ಲಾರ್ಸನ್ ಅವರು ಹಿರಿಯ ಉಪನ್ಯಾಸಕರೂ, ಉತ್ತಮ ವಾಗ್ಮಿ, ಕಾರ್ಯಕ್ರಮ ನಿರ್ವಾಹಕರೂ ಆಗಿದ್ದಾರೆ. ಸಂವಿಧಾನಕ್ಕೆ ಸಂಬಂಧಿಸಿದಂತೆ ಹಲವಾರು ಉಪನ್ಯಾಸಗಳನ್ನು ಅವರು ನೀಡಿದ್ದಾರೆ. ಮೂಡುಬೆಳ್ಳೆಯಲ್ಲಿ ರಾಜ್ಯ ಮಟ್ಟದ ಎನ್ನೆಸ್ಸೆಸ್‍ ಶಿಬಿರವನ್ನು ಅವರು ಆಯೋಜಿಸಿದ್ದರು. ಮೂಡುಬೆಳ್ಳೆಯಲ್ಲಿ ಜರಗಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಕಾರ್ಯಕ್ರಮ ನಿರ್ವಹಣೆ, ಇತ್ತೀಚೆಗೆ ನಡೆದ ಕ್ರಿಶ್ಚಿಯನ್ ಸಮಾಜೋತ್ಸವದಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಿ ಅಪಾರ ಶ್ಲಾಘನೆಯನ್ನು ಅವರು ಪಡೆದಿದ್ದಾರೆ. 

-ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ