Saturday 15 September 2018

ಕಾಪು ತಾ| ಗ್ರಾಮ ಕರಣಿಕರ ಸಂಘ: ವಿಜಯ್ ಅಧ್ಯಕ್ಷ, ಕ್ಲೇರೆನ್ಸ್ ಉಪಾಧ್ಯಕ್ಷ



ಮೂಡುಬೆಳ್ಳೆ, ಸೆ. 15: ನೂತನ ಕಾಪು ತಾಲೂಕಿನ ಗ್ರಾಮ ಕರಣಿಕರ ಸಂಘದ ಅಧ್ಯಕ್ಷರಾಗಿ ಶಿರ್ವದ ಗ್ರಾಮ ಕರಣಿಕ ವಿಜಯ್ ಅವರು ಆಯ್ಕೆಯಾಗಿದ್ದಾರೆ. ವಿಜಯ್ ಅವರು ಹಿರಿಯ ಗ್ರಾಮ ಕರಣಿಕರಾಗಿದ್ದು ಈ ಹಿಂದೆ ಪ್ರಭಾರ ರಾಜಸ್ವ ಪರಿವೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಸಾರ್ವಜನಿಕರೊಂದಿಗೆ ಸದಾ ನಗುಮುಖದಿಂದ ವ್ಯವಹರಿಸುವ ಸಂವೇದನಾಶೀಲ ಅಧಿಕಾರಿ ವಿಜಯ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಂಘವನ್ನೂ ಕರ್ತವ್ಯ ನಿರ್ವಹಿಸುವಷ್ಟೇ ಕಾಳಜಿಯಿಂದ ಮುನ್ನಡೆಸಲಿದ್ದಾರೆ.

ಸಂಘದ ಉಪಾಧ್ಯಕ್ಷರಾಗಿ ಕುರ್ಕಾಲು ಗ್ರಾಮ ಕರಣಿಕರಾದ ಕ್ಲೇರೆನ್ಸ್ ಲೆಸ್ಟನ್ ಅವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಲೋಕನಾಥ ಲಮಾಣಿ, ಸಹಕಾರ್ಯದರ್ಶಿಗಳಾಗಿ ಶ್ಯಾಮ ಸುಂದರ್, ಮಾನಸ ಬಿ.ಕೆ. ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅರುಣ್ ಕುಮಾರ್, ಕೋಶಾಧಿಕಾರಿಯಾಗಿ ಶ್ವೇತಾ ಪಿ. ಸುವರ್ಣ, ಜಿಲ್ಲಾ ಸಂಘದ ಪ್ರತಿನಿಧಿಯಾಗಿ ಗಣೇಶ ಮೇಸ್ತ ಆಯ್ಕೆಯಾಗಿದ್ದಾರೆ.

Tuesday 4 September 2018

ಮುಖ್ಯ ಶಿಕ್ಷಕ ವಿವೇಕಾನಂದ ಶೆಟ್ಟಿ ಅವರಿಗೆ ಗುರುವಂದನೆ



 
ಮೂಡುಬೆಳ್ಳೆ, ಸೆ. 5: ಮೂರು ದಶಕಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಅರಳಿಸುವ ಸೇವೆಯಲ್ಲಿ ತೊಡಗಿರುವ ಹಾಗೂ ಎಡ್ಮೇರು ಶ್ರೀ ಮಹಾಬಲೇಶ್ವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಈ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತಿ ಹೊಂದಲಿರುವ ಶ್ರೀ ವಿವೇಕಾನಂದ ಶೆಟ್ಟಿ ಅವರನ್ನು ಶಿಕ್ಷಕರ ದಿನಾಚರಣೆ ಪ್ರಯುಕ್ತ ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅವರು ಸಮ್ಮಾನಿಸಿ ಗುರುವಂದನೆ ಸಲ್ಲಿಸಿದರು.

ಎಡ್ಮೇರು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿರುವ ಮಕ್ಕಳು ಮಾತ್ರವೇ ಕನ್ನಡ ಶಾಲೆಗಳಿಗೆ ಬರುವ ಈ ಕಾಲಘಟ್ಟದಲ್ಲಿ ಎಡ್ಮೇರು ಶಾಲೆಯನ್ನು ಆರ್ಥಿಕ ಸಂಕಷ್ಟದ ನಡುವೆಯೂ ದಾನಿಗಳ ಸಹಕಾರದಿಂದ ಮಾದರಿ ಶಾಲೆಯಾಗಿ ಮುನ್ನಡೆಸಿದ ಕೀರ್ತಿ ವಿವೇಕಾನಂದ ಶೆಟ್ಟಿ ಅವರದು. ಇದು ಈ ಶಾಲೆಗೆ ಖುದ್ದಾಗಿ ಭೇಟಿ ಕೊಟ್ಟರೆ ಮಾತ್ರ ತಿಳಿದು ಬರುತ್ತದೆ. ಸಕಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಪಡೆಯುತ್ತಿದ್ದಾರೆ. ಗೌರವ ಶಿಕ್ಷಕರ ಸಂಬಳವನ್ನು ವಿವೇಕಾನಂದ ಶೆಟ್ಟಿ ಅವರೇ ಸ್ವಂತ ವೇತನದಿಂದ ಭರಿಸುತ್ತಿದ್ದಾರೆ. ಸಮಾಜಮುಖಿಯಾಗಿ ಸೇವಾ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಸಮ್ಮಾನ-ಪ್ರಶಸ್ತಿಗಳ ಸಾಧ್ಯತೆ ಹೇರಳವಾಗಿದ್ದರೂ, ಅವುಗಳಿಗೆ ಬೆನ್ನು ಬೀಳದೆ ಸೌಜನ್ಯದಿಂದಲೇ ನಿರಾಕರಿಸುವ ಅವರು, ಇಂದು ಊರಿನವರೇ ಒತ್ತಾಯಿಸಿದಾಗಿ ನಿರ್ವಾಹವಿಲ್ಲದೆ ಒಪ್ಪಿಕೊಳ್ಳುವಂತಾಗಿದೆ. ಇಂಥ ಅಪರೂಪದ, ನೈಜ ಕಾಳಜಿಯ ಶಿಕ್ಷಕ ಈ ಸಾಲಿನಲ್ಲಿ ನಿವೃತ್ತಿಯಾಗುತ್ತಿರುವುದು ಶಿಕ್ಷಕ ಸಮುದಾಯವನ್ನು ಬಡವಾಗುವಂತೆ ಮಾಡಿದೆ ಎಂದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜೇಂದ್ರ ಶೆಟ್ಟಿ ಅವರು ಮಾತನಾಡಿ, ಸಮ್ಮಾನಕ್ಕೆ ಅಂಜುವ ವಿವೇಕ ಮಾಸ್ಟ್ರು, ನಮ್ಮ ಒತ್ತಾಯಕ್ಕಾದರೂ ಮಣಿದಿರುವುದು ಸುಕೃತ. ನಮ್ಮ ಊರಿನಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಈ ಶಿಕ್ಷಕ ನಮ್ಮೆಲ್ಲರ ಹೆಮ್ಮೆ ಎಂದರು.
  
ಬೆಳ್ಳೆ ಗ್ರಾಪಂ ಸದಸ್ಯರಾದ ಸುಧಾಕರ ಪೂಜಾರಿ, ಗುರುರಾಜ್ ಭಟ್, ಪಾಣಾರ ಸಂಘದ ಅಧ್ಯಕ್ಷ ಸುಧಾಕರ ಪಾಣಾರ, ವಕೀಲರಾದ ಸಂತೋಷ್‍ ಕುಮಾರ್ ಮೂಡುಬೆಳ್ಳೆ ಉಪಸ್ಥಿತರಿದ್ದರು.