Sunday 1 September 2013

ಡಾ. ಜೆ. ಸಿ. ಮಿರಾಂಡ


ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ನೆನಪಾಗಿ ಭಾವುಕನನ್ನಾಗಿಸಿದವರು
ಸರಳ ಸಜ್ಜನಿಕೆಯ ಶ್ರೇಷ್ಠ ಮಾನವತಾವಾದಿ ಪ್ರಾಂಶುಪಾಲರಾದ ಡಾ. ಜೆ. ಸಿ. ಮಿರಾಂಡ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

ಅಂದು ಜೋರಾಗಿ ಮಳೆ ಸುರಿಯುತ್ತಿತ್ತು. ಹಾಗೆಯೇ ಕಣ್ಣಲ್ಲಿ ನೀರು! ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ದ್ವಿತೀಯ ಬಿ. . ವ್ಯಾಸಂಗ ಮಾಡುತ್ತಿದ್ದ ನನಗೆ ಫೀಸ್ ಕಟ್ಟಲು ಕೊನೆಯ ದಿನ. ನನ್ನಲ್ಲಿ ಹಣವಿರಲಿಲ್ಲ. ಫೀಸ್ ಕಟ್ಟದೆ ಬೇರೆ ದಾರಿ ಇಲ್ಲ. ಅಲ್ಲಿ ಇಲ್ಲಿ ಹೊಂದಿಸಿದ ಒಂದಿಷ್ಟು ಹಣವನ್ನು ತೆಗೆದುಕೊಂಡು ನೇರವಾಗಿ ಪ್ರಾಂಶುಪಾಲರ ಕಛೇರಿಗೆ ಹೋದೆ. ಆಗ ಪ್ರಾಂಶುಪಾಲರಾಗಿದ್ದವರು    ಡಾ. ಜೆ. ಸಿ. ಮಿರಾಂಡ. ಅಲ್ಲಿಯವರೆಗೆ ನಾನು ಅವರನ್ನು ಮಾತಾಡಿಸಿದ್ದಿಲ್ಲ. ಮೊದಲನೆಯ ಬಾರಿಗೆ ಅವರನ್ನು ಮುಖತಃ ಭೇಟಿಯಾಗುವುದು. ಎದೆಯಲ್ಲಿ ನಡುಕ, ಕಣ್ಣಲ್ಲಿ ನೀರು!
     ಮೇ ಕಮ್ ಇನ್ ಸರ್ ಅಂದೆ. ಅವರು ನನ್ನನ್ನು ನೋಡಿ ಎಷ್ಟೋ ವರ್ಷದ ಪರಿಚಯಸ್ಥರಂತೆ ನಗುತ್ತಾ ಕಮ್ ಇನ್ ಅಂದರು. ನಾನು ಒಳಗೆ ಬಂದವನೇ ಗುಡ್ ಮಾನರ್ಿಂಗ್ ಸಾರ್ ಅಂದೆ. ಗುಡ್ ಮಾನರ್ಿಂಗ್ ಎಂದ ಅವರು ನನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಈತ ಏನೋ ತೊಂದರೆಯಲ್ಲಿದ್ದಾನೆ ಎಂದು ಅವರಿಗೆ ತಿಳಿಯಿತೋ ಏನೋ ವಿದ್ಯಾಥರ್ಿಯಾಗಿದ್ದ ನನ್ನನ್ನು ಕುಳಿತುಕೊಳ್ಳಲು ಹೇಳಿದರು. ನಾನು ಬೇಡ ಸಾರ್ ನಿಮ್ಮ ಮುಂದೆ ಕುಳಿತುಕೊಳ್ಳುವುದು ಸರಿಯಲ್ಲ ಎಂದೆ. ಇಲ್ಲಿ ಪ್ರಿನ್ಸಿಪಾಲ್ ನಾನು ನೀನಲ್ಲ ಎಂದು ಅವರು ಸ್ಪಲ್ಪ ಗಂಭೀರವಾಗಿಯೇ ಹೇಳಿದಾಗ ನಾನು ಕುಳಿತುಕೊಳ್ಳಲೇಬೇಕಾಯಿತು. ನನ್ನ ಬಗ್ಗೆ ತಿಳಿದುಕೊಳ್ಳಬಯಸಿದ ಅವರು ನನ್ನ ಹೆಸರು, ಮನೆ ಇತ್ಯಾದಿ ವಿವರಗಳನ್ನು ಕೇಳಿದರು. ನನ್ನ ಸಮಸ್ಯೆಯನ್ನು ಅವರ ಬಳಿ ಹೇಳಿಕೊಂಡೆ. ನಡುನಡುವೆ ಅಳು ಬರುತ್ತಿತ್ತು. ಅವರು ತಾಳ್ಮೆಯಿಂದಲೇ ಇದ್ದರು. ಬೇರೆಯವರು ನನ್ನ ಮಾತುಗಳನ್ನು ಕೇಳಬಾರದು ಎಂಬ ಕಾರಣಕ್ಕೆ ಅವರೇ ಚೇಂಬರ್ನ ಬಾಗಿಲು ಹಾಕಿದರು. ಅವರ ಕುಚರ್ಿಯಿಂದ ಎದ್ದು ನನ್ನ ಬಳಿ ಬಂದು ಕುಳಿತರು. ನನ್ನನ್ನು ಪ್ರೀತಿಯಿಂದ ಸಮಾಧಾನಪಡಿಸುತ್ತಾ ಅವರೇ ಅತ್ತುಬಿಟ್ಟರು.
     ಏನೂ ಯೋಚನೆ ಮಾಡಬೇಡ. ನಾನಿದ್ದೇನೆ. ಅಧ್ಯಾಪಕರು ನಿನ್ನ ಬಗ್ಗೆ ತುಂಬಾ ಹೇಳುತ್ತಿರುತ್ತಾರೆ. ನೀನು ಎಷ್ಟು ಕಲಿಯುತ್ತೀಯೋ ಅಷ್ಟರವರೆಗೆ ನಾನೇ ನಿನ್ನನ್ನು ಕಲಿಸುತ್ತೇನೆ ಎಂದರು. ನನಗೆ ಅಳು ತಡೆಯಲಾಗಲಿಲ್ಲ. ಅವರ ಕೈಹಿಡಿದು ಜೋರಾಗಿ ಅತ್ತುಬಿಟ್ಟೆ. ಅವರು ನನ್ನ ತಲೆಸವರಿ ಸಮಾಧಾನಪಡಿಸಿದರು. ನಾನು ತಂದಿದ್ದ ಫೀಸಿನ ಹಣವನ್ನು ನನಗೇ ಹಿಂದಿರುಗಿಸಿ ಅವರ ಜೇಬಿನಿಂದ ಎರಡು ಸಾವಿರ ರೂಪಾಯಿಯನ್ನು ನನ್ನ ಕೈಗಿಟ್ಟರು. ನಿನಗೆ ಕಷ್ಟವೆಂದೆನಿಸಿದಾಗ ನೇರವಾಗಿ ನನ್ನನ್ನು ಸಂಪಕರ್ಿಸು ಎಂದರು. ಆಪ್ತನಲ್ಲದ, ಸಂಬಂಧವಿಲ್ಲದ ನನ್ನನ್ನು ಆದರದಿಂದ ನೋಡಿಕೊಂಡರು. ಅವರು ನನ್ನ ಪಾಲಿನ ಸಾಕ್ಷಾತ್ ದೇವರಾಗಿದ್ದರು. ನನ್ನ ಬಾಯಿಯಿಂದ ಒಂದು ಮಾತೂ ಹೊರಡಲಿಲ್ಲ. ಕೈಮುಗಿದು ಹೊರಬಂದೆ.
     ಘಟನೆಯ ನಂತರ ನನ್ನ ಮತ್ತು ಪ್ರಾಂಶುಪಾಲರ ಬಾಂಧವ್ಯ ಗಾಢವಾಯಿತು. ಅವರು ಸಾಮಾನ್ಯರಲ್ಲಿ ತೀರಾ ಸಾಮಾನ್ಯರಂತೆ ವತರ್ಿಸುತ್ತಿದ್ದರು. ಗ್ರೇಡ್ 1 ಪ್ರಾಂಶುಪಾಲರಾಗಿ ಪಾಂಪೈ ಕಾಲೇಜು, ಸಂತ ಫಿಲೋಮೆನಾ ಕಾಲೇಜಿನಲ್ಲಿ ಸೇವೆಸಲ್ಲಿಸಿದ ಅವರು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದರು. ಯಾರಾದರೂ ಎದುರು ಸಿಕ್ಕಾಗ ಅವರೇ ನಮಸ್ಕರಿಸುತ್ತಿದ್ದರು. ಮತ್ತೊಬ್ಬರು ನಮಸ್ಕರಿಸಬೇಕು ಎಂದು ಯಾವತ್ತೂ ಕಾಯುತ್ತಿರಲಿಲ್ಲ.  ಅವರ ವಿನಯ ನಮಗೆ ಆದರ್ಶವಾಗಿತ್ತು. ಬಿ.. ಕೋರ್ಸನ್ನು ತುಚ್ಛವಾಗಿ ಕಾಣುತ್ತಿರುವ ಕಾಲದಲ್ಲಿ ಅವರು ನಮಗೆ ಮೊದಲ ಆದ್ಯತೆ ನೀಡುತ್ತಿದ್ದರು. ಎಲ್ಲಾ ಪದವಿ ಕೋಸರ್ುಗಳೂ ಸಮಾನ ಮೌಲ್ಯ ಮತ್ತು ಅವಕಾಶಗಳನ್ನು ಹೊಂದಿದೆ ಎನ್ನುವುದು ಅವರ ವಾದವಾಗಿತ್ತು. ನಮ್ಮಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ಸಬಲೀಕರಣಕ್ಕೆ ಭಾಷಣಕಲೆಯ ತರಬೇತಿ, ಕಥಾಕಮ್ಮಟ, ಚಚರ್ಾಕೂಟಗಳನ್ನು ನಡೆಸುತ್ತಿದ್ದರು. ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ನಮಗೆ ಇಂಗ್ಲೀಷ್ ಮಾತನಾಡಲು ಕಲಿಸುತ್ತಿದ್ದರು. ಬಿ.. ವಿದ್ಯಾಥರ್ಿಗಳು ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಅವರೇ ಕಂಪ್ಯೂಟರ್ ತರಗತಿಗಳನ್ನು ನಡೆಸುತ್ತಿದ್ದರು. ಅಕೌಂಟಿಂಗ್ ಜ್ಞಾನ ದೊರಕಿಸಲು ವಿಶೇಷ ಉಪನ್ಯಾಸಗಳನ್ನು ಆಯೋಜಿಸುತ್ತಿದ್ದರು. ಬೇರೆ ಬೇರೆ ಕಾಲೇಜಿನಲ್ಲಿ ನಡೆಯುವ ವಿಚಾರಸಂಕಿರಣಗಳಲ್ಲಿ, ತರಬೇತಿ ಕಾಯರ್ಾಗಾರಗಳಲ್ಲಿ ಭಾಗವಹಿಸಲು ಅವರ ಕೈಯಿಂದಲೇ ಪ್ರಯಾಣ ಭತ್ಯೆ ನೀಡುತ್ತಿದ್ದರು.
     ಪ್ರತಿಯೊಬ್ಬ ವಿದ್ಯಾಥರ್ಿಯ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿತ್ತು. ದೂರದ ಕಿನ್ನಿಗೋಳಿಯಿಂದ ಬೆಳಗ್ಗೆ 8 ಗಂಟೆಗೇ ಕಾಲೇಜಿಗೆ ಬಂದು ನಮ್ಮೊಂದಿಗೆ ಬೆರೆಯುತ್ತಿದ್ದರು. ಸಂಜೆ 5.30ರವರೆಗೂ ಕಾಲೇಜಲ್ಲೇ ಇರುತ್ತಿದ್ದರು. ಬಡವರನ್ನು ಕಂಡಾಗ ಅವರ ಮನಸ್ಸು ಮರುಗುತ್ತಿತ್ತು. ಯಾರೊಂದಿಗೂ ಸಿಟ್ಟಿನಿಂದ ಮಾತನಾಡದ ಅವರು ಸಹೋದ್ಯೋಗಿಗಳೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು.
     ನಮ್ಮಲ್ಲಿ ಹೆಚ್ಚಿನವರು ಊಟಕ್ಕೆ ಕ್ಯಾಂಟೀನ್ಗೆ ಹೋಗುತ್ತಿದ್ದರು. ಆದರೆ ಬುತ್ತಿ ತರುವ ನಾವು  ನಮ್ಮ ನಮ್ಮ ತರಗತಿಗಳಲ್ಲಿ ಕುಳಿತು ಊಟ ಮಾಡುತ್ತಿದ್ದೆವು. ಇದನ್ನು ಗಮನಿಸಿದ ಅವರು ನಮಗೆಲ್ಲಾ ಒಂದೇ ಕಡೆ ಊಟಕ್ಕೆ ವ್ಯವಸ್ಥೆ ಮಾಡಿದರು. ಕೆಲವರಿಗೆ ಸ್ವಂತ ಖಚರ್ಿನಲ್ಲಿ ಕ್ಯಾಂಟೀನ್ನಲ್ಲಿ ಊಟ ಕೊಡಿಸಿದರು. ಎಲ್ಲಾ ವಿದ್ಯಾಥರ್ಿಗಳು ಊಟ ಮಾಡಿದ್ದಾರೆ ಎಂದು ತಿಳಿದ ನಂತರವೇ ಅವರು ಊಟ ಮಾಡುತ್ತಿದ್ದರು. ಮಧ್ಯಾನ್ಹದ ಬಿಡುವಿನಲ್ಲಿ ದೂರದರ್ಶನ ವೀಕ್ಷಣೆಗೆ ಮತ್ತು ಅಂತಜರ್ಾಲ ಬಳಸಲು ಅವಕಾಶ ಮಾಡಿಕೊಟ್ಟರು.
     ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಪ್ರಾಂಶುಪಾಲರು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದರು. ನನ್ನಂತಹ ಹಲವಾರು ವಿದ್ಯಾಥರ್ಿಗಳ ಬಾಳಿಗೆ ಆಶಾಕಿರಣವಾಗಿದ್ದರು. ನಮ್ಮ ಪಾಲಿಗೆ ಸಂತ ಮೇರಿ ಕಾಲೇಜು ಒಂದು ದೇವಾಲಯವಾದರೆ ಡಾ. ಜೆ. ಸಿ. ಮಿರಾಂಡರವರು ಅಲ್ಲಿನ ದೇವರಾಗಿದ್ದರು. ಸರಳ ಸಜ್ಜನಿಕೆಯ ಶ್ರೇಷ್ಠ ಮಾನವತಾವಾದಿ ಪ್ರಾಂಶುಪಾಲರಿಗೆ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಹೃದಯಾಂತರಾಳದ ನುಡಿನಮನಗಳು.

(ಡಾ. ಜೆ. ಸಿ. ಮಿರಾಂಡರವರು ಪ್ರಸ್ತುತ ಪಾಂಪೈ ಕಾಲೇಜು, ಐಕಳ ಇಲ್ಲಿ ಪ್ರಾಂಶುಪಾಲರಾಗಿದ್ದಾರೆ. ಅವರನ್ನು ಸಂಪಕರ್ಿಸಲು 9449488225 ಸಂಖ್ಯೆಗೆ ಕರೆ ಮಾಡಿ. ಅವರೊಂದಿಗಿನ ಸಂವಾದವು ನಿಮ್ಮ ಜೀವನದ ರಸಭರಿತ ಕ್ಷಣಗಳಲ್ಲಿ ಒಂದಾಗುವುದಂತೂ ಖಂಡಿತ.)