Friday, 6 November 2026

ಜನರ ಮೆಚ್ಚಿನ ಶಕ್ತಿಮಾನ್: ಆಪದ್ಬಾಂಧವ ರಾಜು ಪಾಣಾರ ಮೂಡುಬೆಳ್ಳೆ


*ಮೂಡುಬೆಳ್ಳೆ ರುದ್ರಭೂಮಿಯಲ್ಲಿ ನಿಸ್ವಾರ್ಥ ಸೇವೆ *ಯಾವ ಹೊತ್ತಿನಲ್ಲೂ ಜನರ ನೆರವಿಗೆ ಸಿದ್ಧ 

ಮೂಡುಬೆಳ್ಳೆ: ಗಾಳಿ ಮಳೆಯಿಂದ ರಸ್ತೆಯಲ್ಲಿ ಮರ ಬಿದ್ದು ಸಂಚಾರ ದುಸ್ತರವಾದಾಗ, ಮನೆಗೆ ಹಾನಿಯಾದಾಗ, ನೆರೆ ಬಂದಾಗ ಬೆಳ್ಳೆ- ಕಟ್ಟಿಂಗೇರಿ ಜನತೆಗೆ, ಗ್ರಾಮ ಪಂಚಾಯತ್‌ಗೆ, ಕಂದಾಯ, ಮೆಸ್ಕಾಂ ಇಲಾಖೆಗೆ ನೆನಪಾಗುವ ಮೊದಲ ಹೆಸರೇ ರಾಜು ಪಾಣಾರ ಮೂಡುಬೆಳ್ಳೆ. ಇವರನ್ನು ಪ್ರೀತಿಯಿಂದ ಜನರು ಶಕ್ತಿಮಾನ್ ಎಂದು ಕರೆಯುತ್ತಾರೆ. ಯಾವ ಹೊತ್ತಿನಲ್ಲೂ ಜನರ ಸೇವೆಗೆ ಲಭ್ಯವಿರುವ ರಾಜು ಅವರು ಮೂಡುಬೆಳ್ಳೆ ರುದ್ರಭೂಮಿಯ ಆರಂಭದಿಂದಲೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 


ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಇದರ ಅಧ್ಯಕ್ಷರಾಗಿರುವ ರಾಜು ಅವರು ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಹಕ್ಕುಗಳ ಸಮಿತಿಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. 


ಮದ್ಯಪಾನ ತೊರೆದು ಮಾದರಿ ಬದುಕು: 

ಕೆಲವು ವರ್ಷಗಳ ಹಿಂದೆ ಮದ್ಯಪಾನ ಮಾಡುತ್ತಿದ್ದ ರಾಜು ಅವರನ್ನು ಅವರ ಸ್ನೇಹಿತರು ಸೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರಕ್ಕೆ ದಾಖಲಿಸಿದ್ದರು. ಅವರು ಮದ್ಯಪಾನ ಬಿಡಲೊಪ್ಪದೆ ಶಿಬಿರದಿಂದ ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲೇ ಓಡಿ ಬಂದಿದ್ದರು. ಗಟ್ಟಿಮುಟ್ಟಾದ ರಾಜು ಅವರನ್ನು ಮತ್ತೆ ಶಿಬಿರಕ್ಕೆ ಸೇರಿಸಲು ಅವರ ಹಿತೈಷಿಗಳು ಹರ ಸಾಹಸ ಪಟ್ಟಿದ್ದರು. ಈ ಶಿಬಿರದ ಮೂಲಕ ಮದ್ಯಪಾನ ಮುಕ್ತರಾದ ಅವರು ಇಂದು ಕುಟುಂಬದೊಂದಿಗೆ ಸಂತೋಷದಿಂದ ಮಾದರಿ ಬದುಕು ನಡೆಸುತ್ತಿದ್ದಾರೆ. ಮದ್ಯಮುಕ್ತ ಮೂಡುಬೆಳ್ಳೆ ಅಭಿಯಾನದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಅನುಭವವನ್ನು ಸಂತೋಷದಿಂದ ಹಂಚಿಕೊಳ್ಳುತ್ತಾರೆ. 


ಶ್ರಮಜೀವಿ: ದಿನವಿಡೀ ಶ್ರಮದ ದುಡಿಮೆಯ ರಾಜು ಅವರು, ಸಮಾಜ ಸೇವೆಯನ್ನೂ ಮಾಡುತ್ತಾ ಎಲ್ಲರಿಗೂ ಬೇಕಾದವರಾಗಿ ಬದುಕುತ್ತಿದ್ದು ಹಲವರಿಗೆ ಮದ್ಯಪಾನ ವ್ಯಸನದಿಂದ ಮುಕ್ತರಾಗಲು ಪ್ರೇರಣೆಯಾಗಿದ್ದಾರೆ. 



Tuesday, 3 November 2026

ಗೋಮಾಳ, ಕರೆ, ಪೊರಂಬೋಕು ಒತ್ತುವರಿ ತೆರವುಗೊಳಿಸಿ: ಮೂಡುಬೆಳ್ಳೆ ನಾಗರಿಕ ಸಮಿತಿ ಪತ್ರ ಚಳವಳಿ


*ಶನಿ
ವಾರ ಕುರ್ಕಾಲು ಗ್ರಾಮದ ಪ್ರಜಾಸೇವೆ ಅಭಿಯಾನದಲ್ಲಿ ಮನವಿಗೆ ಸಿದ್ಧತೆ 

ಮೂಡುಬೆಳ್ಳೆ: ಕಾಪು ತಾಲ್ಲೂಕಿನ ಬೆಳ್ಳೆ ಮತ್ತು ಕಟ್ಟಿಂಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಸರಕಾರಿ ಗೋಮಾಳ, ಕೆರೆ, ಪೊರಂಬೋಕು ಜಮೀನುಗಳನ್ನು ಒತ್ತುವರಿ ಮಾಡಿರುವುದು ಸರ್ವೆ ಪರದಿಯಿಂದ ದೃಢಪಟ್ಟಿದ್ದರೂ ವರ್ಷಗಳಿಂದ ಕಡತ ಬಾಕಿ ಇಟ್ಟುಕೊಂಡಿರುವ ಕಾಪು ಕಂದಾಯ ಇಲಾಖೆ ವಿರುದ್ಧ ಮೂಡುಬೆಳ್ಳೆ ನಾಗರಿಕ ಸಮಿತಿ ಪತ್ರ ಚಳುವಳಿ ಆರಂಭಿಸಿದೆ. ನ, ೭ರಂದು ಕುರ್ಕಾಲು ಗ್ರಾಮದಲ್ಲಿ ನಡೆಯಲಿರುವ ಪ್ರಜಾಸೇವೆ ಅಭಿಯಾನದಲ್ಲಿ ಮನವಿ ಸಲ್ಲಿಸಲು ಸಿದ್ಧವಾಗಿದೆ. 

ಬೆಳ್ಳೆ ಗ್ರಾಮದ ಸನಂ ೩೧೮ರಲ್ಲಿ ಅನಾದಿಕಾಲದಿಂದ ಇದ್ದ ಕೆರೆಯಲ್ಲಿ ಸುಮಾರು ೩೫-೪೫ ಸೆಂಟ್ಸು ಸರಕಾರಿ ಕರೆಯನ್ನು ಒತ್ತುವರಿ ಮಾಡಿಕೊಂಡು ವರ್ಷಗಳೇ ಕಳೆದಿದ್ದರೂ, ಈ ಬಗ್ಗೆ ತಾಲ್ಲೂಕು ಭೂಮಾಪಕರು ಸರ್ವೆ ನಡೆಸಿ ವರದಿ ನೀಡಿದ್ದರೂ ಈ ವರೆಗೆ ಕಂದಾಯ ಇಲಾಖೆ ಯಾವುದೇ ಯಾವುದೇ ಕ್ರಮ ಕೈಗೊಂಡಿಲ್ಲ. 

ಕಟ್ಟಿಂಗೇರಿ ಗ್ರಾಮದ ಸನಂ ೧೭೦ರಲ್ಲಿ ಪೊರಂಬೋಕು ಜಮೀನನ್ನು ವೈನ್‌ಶಾಪ್ ಒತ್ತುವರಿ ಮಾಡಿಕೊಂಡಿದ್ದರೂ, ಗ್ರಾಮ ಕೇಂದ್ರವಾದ ಮುಖ್ಯರಸ್ತೆಯಲ್ಲೇ ಇರುವ  ಈ ಒತ್ತುವರಿ ತೆರವಿಗೆ ಈ ವರೆಗೆ ಸರ್ವೆ ವರದಿ ದೃಢಪಟ್ಟು ಒಂದೂ ವರೆ ವರ್ಷವಾದರೂ ಕಂದಾಯ ಇಲಾಖೆ ಮುಂದಾಗಿಲ್ಲ. ಒತ್ತುವರಿ ತೆರವು ಬಗ್ಗೆ ೨೫.೧೧.೨೦೨೫ರಲ್ಲಿ ತಹಶೀಲ್ದಾರ್‌ಗೆ ಪತ್ರ ಬರೆಯುವ ನಿರ್ಣಯವನ್ನು ಗ್ರಾಮ ಪಂಚಾಯತ್ ಸರ್ವಾನುಮತದಿಂದ ತೆಗೆದುಕೊಂಡಿದ್ದರೂ ಪತ್ರ ಬರೆದ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿಯೇ ಇಲ್ಲ ಎಂದು ನಾಗರಿಕ ಸಮಿತಿ ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗೆ ಬರೆದ ಮನವಿಯಲ್ಲಿ ತಿಳಿಸಿದೆ. 

ಬಾಕ್ಸ್: ಗೋಮಾಳವೇ ಗುಳುಂ!

ಕಟ್ಟಿಂಗೇರಿ ಗ್ರಾಮದಲ್ಲಿ ಸನಂ ೧೮೦ರಲ್ಲಿ ೩ ಎಕ್ರೆಗೂ ಮಿಕ್ಕಿ ಗೋಮಾಳವನ್ನೇ ಸ್ವಾಧೀನದಲ್ಲಿಟ್ಟುಕೊಂಡಿದ್ದರೂ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸನಂ ೧೩೩ರಲ್ಲಿ ದಲಿತರ ಸಂಪೂರ್ಣ ಹಕ್ಕಿನ ಡಿಸಿ ಮನ್ನಾ ಜಮೀನು ಅನಧಿಕೃತವಾಗಿ ಮಂಜೂರಾತಿ ಮಾಡಿದ್ದರೂ ಈ ವರಗೆ ಕನಿಷ್ಟ ಅಳತೆಯೂ ಆಗಿಲ್ಲ. ಕಟ್ಟಿಂಗೇರಿ ಗ್ರಾಮದ ಸನಂ ೬ರಲ್ಲಿ ಸಾರಾಯಿ, ಶೇಂದಿ ಅಂಗಡಿಯ ಜಾಗ ಮೀಸಲಿರಿಸಿದ್ದು, ಇದೇ ಜಾಗವನ್ನು ಸುಮಾರು ೧೦೦ ವರ್ಷಗಳಿಂದ ಮನೆ ಕಟ್ಟಿ ವಾಸಿಸುತ್ತಿರುವ ಬಡ ದಲಿತ ಕುಟುಂಬಗಳಿಗೆ ಪೊರಂಬೋಕು ಬಂಡೆ ಕಾರಣ ಕೊಟ್ಟು ಹಕ್ಕುಪತ್ರ ನೀಡುತ್ತಿಲ್ಲ. 

ನೋವಿಗೆ ಮಿಡಿಯುವ ಅಂತಃಕರಣ: ನಟೇಶ ಮೂಡುಬೆಳ್ಳೆ


*ದಣಿವರಿಯದ ಯುವ ಸಮಾಜಸೇವಕ

*ವೇಷ ಧರಿಸಿ ವರ್ಷಗಳಲ್ಲಿ 10 ಲಕ್ಷ ದೇಣಿಗೆ 

*ಬೆಳಕು ಫ್ರೆಂಡ್ಸ್ ತಿರ್ಲಪಲ್ಕೆ, ಮೂಡುಬೆಳ್ಳೆ ತಂಡದಿಂದ ಸೇವೆ 

ಮೂಡುಬೆಳ್ಳೆ: ವೃತ್ತಿಯಲ್ಲಿ ಎಲೆಕ್ಟ್ರಿಶನ್ ಆಗಿ ಹಗಲಿರುಳು ಕುಟುಂಬಕ್ಕಾಗಿ ದುಡಿಯುವ ಮೂಡುಬೆಳ್ಳೆ ತಿರ್ಲಪಲ್ಕೆಯ ನಟೇಶ್ ಅವರದ್ದು ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತವುಳ್ಳ ಅಂತಃಕರಣವಾಗಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಅವರು ಮೂಡುಬೆಳ್ಳೆಯ ಜನರ, ವಿಶೇಷವಾಗಿ ಹಿರಿಯ ನಾಗರಿಕರ, ವಿಶೇಷ ಚೇತನರ, ಅನಾರೋಗ್ಯ ಪೀಡಿತರ ತುರ್ತು ಅಗತ್ಯಕ್ಕೆ ಸ್ಪಂದಿಸಿ ಮನೆಮಾತಾಗಿದ್ದಾರೆ. ರಸ್ತೆಗಳಲ್ಲಿ ಮರಣಗುಂಡಿಗಳು ಕಾಣಸಿಕ್ಕಾಗ ಜನರು ನೆನಪಿಸಿಕೊಳ್ಳುವುದು ನಟೇಶರನ್ನೇ!



ಬೆಳಕು ತಂಡಕ್ಕೆ ೫ ವರ್ಷ: ಕಳೆದ 5 ವರ್ಷಗಳಿಂದ ಸಮಾನ ಮನಸ್ಕರೊಂದಿಗೆ ಸೇರಿ ಬೆಳಕು ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಚೌತಿ ಮತ್ತು ಅಷ್ಟಮಿ ಸಂದರ್ಭ ಸೃಜನಶೀಲ ವೇಷಗಳನ್ನು ಧರಿಸಿ ಅದರ ಮೂಲಕ ಸಂಗ್ರಹವಾದ ಹಣವನ್ನು ತೀರಾ ಅಶಕ್ತ ಕುಟುಂಬಗಳಿಗೆ ನೀಡಿದ ಹಿರಿಮೆ ಅವರದ್ದು. ಮೊದಲನೇ ವರ್ಷದದಲ್ಲಿ 1.59 ಲಕ್ಷ, 2ನೇ ವರ್ಷ 1.50 ಲಕ್ಷ, 3 ನೇ ವರ್ಷ 1.80 ಲಕ್ಷ, 4ನೇ ವರ್ಷ 2 ಲಕ್ಷ, 5ನೇ ವರ್ಷ 2.50 ಲಕ್ಷ ರೂ ಸಂಗ್ರಹಿಸಿ ಬಡವರಿಗೆ, ಅನಾರೋಗ್ಯ ಪೀಡಿತರಿಗೆ ನೀಡಿದ್ದಾರೆ. 


ಸೃಜನಶೀಲ ವೇಷಗಳು ಡ್ರ್ಯಾಗನ್, ಮಾನ್‌ಸ್ಟರ್ ಹೀಗೆ ವಿವಿಧ ಸೃಜನಾತ್ಮಕ ವೇಷಗಳನ್ನು ಧರಿಸಿ ಮನೋರಂಜನೆಯ ಜತೆಗೆ ಮಾನವೀಯ ಸೇವೆಯನ್ನೂ ಅವರು ನೀಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೂ ನೆರವಾಗಿದ್ದಾರೆ. 

ಏಕವ್ಯಕ್ತಿ ವೇಷ: ತಂಡವಿಲ್ಲದೆ ಒಬ್ಬರೇ ವೇಷ ಹಾಕಿ ಅಪಘಾತದ ಗಾಯಾಳುಗಳ ಚಿಕಿತ್ಸಗೆ ವೆಚ್ಚವನ್ನು [ಸುಮಾರು 2 ಲಕ್ಷ ರೂ.ಗೂ ಹೆಚ್ಚ] ಸಂಗ್ರಹಿಸಿ ನೀಡಿದ್ದಾರೆ. ಯುವಕರ ತಂಡವನ್ನೇ ಕಟ್ಟಿಕೊಂಡಿರುವ ನಟೇಶ ಮೂಡುಬೆಳ್ಳೆ ಬೆಳಕು ತಂಡವನ್ನು ಮುನ್ನಡೆಸುತ್ತಿದ್ದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಜನರಿಗೆ ಸಹಾಯ ಮಾಡುವ ಇಚ್ಛೆ ಹೊಂದಿದ್ದಾರೆ. ವೃದ್ಧಾಶ್ರಮ, ಅನಾಥಾಶ್ರಮಗಳಿಗೆ, ಬಾಲನಿಕೇತನಗಳಿಗೆ ಭೇಟಿ ನೀಡಿ ಅಲ್ಲಿ ಊಟದ ವ್ಯವಸ್ಥೆಯನ್ನು ಮಾಡಿ ಭೇಶ್ ಎನಿಸಿಕೊಂಡಿದ್ದಾರೆ. 

-ಊರಿನಲ್ಲಿದ್ದು ಕೆಲಸ ಮಾಡುವ ನಾವು ನಮ್ಮ ಪ್ರತಿಭೆಯ ಮೂಲಕ ಏನನ್ನಾದರೂ ಸಾಧಿಸಿಕೊಂಡು ಅದರಿಂದ ಜನರಿಗೆ ವಿಶೇಷವಾಗಿ ಅಗತ್ಯವಿದ್ದವರಿಗೆ ನೆರವು ನೀಡುವುದು ನನ್ನ ಉದ್ದೇಶವಾಗಿದೆ.

-ನಟೇಶ ಮೂಡುಬೆಳ್ಳೆ 



Monday, 2 November 2026

ಕಟ್ಟಿಂಗೇರಿ: ನೀರಿನ ಟ್ಯಾಂಕ್ ಕಾಮಗಾರಿ ಆರಂಭಕ್ಕೆ ಸೂಚನೆ

 


ಮೂಡುಬೆಳ್ಳೆ: ಉಡುಪಿ ಜಿಲ್ಲೆಯ 69 ಗ್ರಾಮಗಳಿಗೆ ವಾರಹಿ ನದಿಯ ನೀರನ್ನು ಹಾಲಾಡಿಯಿಂದ ಪೈಪ್ಲೈನ್ ಮೂಲಕ ಪೂರೈಸುವ ಒಂದು 1200 ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ ಯೋಜನೆಗೆ ಅರಣ್ಯ ಇಲಾಖೆಯು ಅಡ್ಡಿಯಾಗಿತ್ತು. ನಾಗರಿಕರ ಸಮಿತಿ ಮೂಡುಬೆಳ್ಳೆ ಈ ಬಗ್ಗೆ ನಿರಂತರ ಹೋರಾಟ ನಡೆಸಿತ್ತು.



ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಈ ಬಗ್ಗೆ ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತಿ ಸಿಇಒ ಅವರ ಗಮನಕ್ಕೆ ತಂದಿದ್ದರು. ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ಈ ವಿಷಯ ತರಲಾಗಿತ್ತು. 


ಈ ಬಗ್ಗೆ ಮೂಡುಬೆಳ್ಳೆಯಲ್ಲಿ ಅ. ಐದರಂದು ಸಾರ್ವಜನಿಕರಿಂದ ಪ್ರತಿಭಟನೆಯೂ ನಡೆದಿತ್ತು. ಕಾಪು ತಹಸಿಲ್ದಾರ್ ಅನಂತ ಶಂಕರ ಅವರು ಸಾರ್ವಜನಿಕರ ಹಲವಾರು ಮನವಿಗಳ ಬಳಿಕ ಜಿಲ್ಲಾಧಿಕಾರಿಗಳಿಗೆ ಯಥಾ ಸ್ಥಿತಿ ವರದಿಯನ್ನು ಸಲ್ಲಿಸಿ ಟ್ಯಾಂಕ್ ನಿರ್ಮಾಣ ಸ್ಥಳವು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನವೆಂಬರ್ 2 ರಂದು ನಡೆದ ಕೆಡಿಪಿ ಸಭೆಯಲ್ಲೂ ಧ್ವನಿಯೆತ್ತಿದ್ದರು. 



ಇದೆಲ್ಲ ಪ್ರಯತ್ನಗಳ ಪರಿಣಾಮವಾಗಿ ಕಟ್ಟಿಂಗೇರಿಯಲ್ಲಿ ನೀರಿನ ಟ್ಯಾಂಕ್ ರಚನೆಗೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಕುಡಿಯುವ ನೀರಿನ ಇಲಾಖೆಯ ಇಂಜಿನಿಯರ್ ಉದಯಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.

ಪಿಡಬ್ಲ್ಯೂಡಿ ನೊಟೀಸಿಗೆ ಕ್ಯಾರೇ ಎನ್ನದ ಅರಣ್ಯ ಇಲಾಖೆ! ಇಲಾಖೆಗಳ ನಡುವೆ ಸಮನ್ವಯ ಸಾಧಿಸದ ಜಿಲ್ಲಾಡಳಿತ


ಮೂಡುಬೆಳ್ಳೆ: ಉಡುಪಿ-ಕಾರ್ಕಳ ರಾಜ್ಯ ಹೆದ್ದಾರಿಯ ಚರಂಡಿಯಲ್ಲೇ ಅರಣ್ಯ ಇಲಾಖೆ ಸಾರ್ವಜನಿಕರ ಹಣವನ್ನು ಪೋಲು ಮಾಡಿ ಗಿಡ ನೆಟ್ಟಿದ್ದು, ಚರಂಡಿಯನ್ನು ಮುಚ್ಚಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯು ಅರಣ್ಯ ಇಲಾಖೆಗೆ 19.10.2026ರಂದು ನೊಟೀಸ್ ನೀಡಿದ್ದರೂ ಅರಣ್ಯ ಇಲಾಖೆ ಈ ನೊಟೀಸಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು ಜಿಲ್ಲಾಡಳಿತ ಸಭೆಗಳನ್ನು ನಡೆಸುವುದಕ್ಕೆ ಮಾತ್ರ ಸೀಮಿತವಾಗಿದೆ. 

ಈ ಬಗ್ಗೆ 02.11.2026ರಂದು ಅರಣ್ಯ ಇಲಾಖೆಗೆ ನೆನಪೋಲೆ ಕಳಿಸಿರುವ ಉಡುಪಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಅವರು, ಅರಣ್ಯ ಇಲಾಖೆಯು ತಮ್ಮ ನೊಟೀಸಿಗೆ ಬೆಲೆ ನೀಡದ ವಿರುದ್ಧ ಜನರು ಕೀಳಾಗಿ ಮಾತನಾಡುವಂತಾಗಿದೆ. ಇಲಾಖಾ ಸಚಿವರಿಗೂ ಈ ಬಗ್ಗೆ ದೂರು ನೀಡಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ನೆಟ್ಟ ಗಿಡಗಳನ್ನು ಕೂಡಲೇ ತೆರವು ಮಾಡದಿದ್ದಲ್ಲಿ ತಮ್ಮ ಇಲಾಖೆ ವತಿಯಿಂದಲೇ ಗಿಡಗಳನ್ನು ತೆರವು ಮಾಡಿ ಖರ್ಚನ್ನು ಅರಣ್ಯ ಇಲಾಖೆ ಮೇಲೆ ವಿಧಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.  


ಪ್ರಜಾಸೇವೆಗೆ ಕರಿಪತಾಕೆ ಎಚ್ಚರಿಕೆ

ಮುಂದಿನ ಶನಿವಾರದ ಒಳಗೆ ಚರಂಡಿಯಲ್ಲಿ ನೆಟ್ಟ ಗಿಡಗಳನ್ನು ತೆರವುಗೊಳಿಸದಿದ್ದಲ್ಲಿ ಮತ್ತು ನೆಲ್ಲಿಕಟ್ಟೆ ಪ್ರದೇಶದಲ್ಲಿ ಹೆದ್ದಾರಿ ಬದಿಯಲ್ಲಿ ವರ್ಷದಿಂದ ಬಿದ್ದಿರುವ ಮಣ್ಣುರಾಶಿಯನ್ನು ತೆರವುಗೊಳಿಸದೇ ಇದ್ದಲ್ಲಿ ಶನಿವಾರ ನಡೆಯುವ ಪ್ರಜಾಸೇವಾ ಅಭಿಯಾನದಲ್ಲಿ ಕರಿಪತಾಕೆ ಪ್ರದರ್ಶಿಸಲಾಗುವುದು ಎಂದು ಮೂಡುಬೆಳ್ಳೆ ನಾಗರಿಕ ಸಮಿತಿ ಗೌರವಾಧ್ಯಕ್ಷ ರಾಜೇಂದ್ರ ಶೆಟ್ಟಿ ಎಚ್ಚರಿಕೆ ನೀಡಿದ ಬೆನ್ನಿಗೇ ನ. ೨ರಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಂಡು ಸ್ಥಳಕ್ಕೆ ಭೇಟಿ ನೀಡಿದ್ದು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. 


ಸಾಯುವ ಮೊದಲಾದರೂ ಇ ಸ್ವತ್ತು ಸರಿಪಡಿಸಿ!!: 83 ವರ್ಷದ ವೃದ್ಧೆಯ ಅಳಲು

ನನಗೀಗ 83 ವರ್ಷ ವಯಸ್ಸಾಗಿದ್ದು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನನ್ನ ಜೀವಿತಕಾಲದಲ್ಲಿಯೇ ನನ್ನ ಮನೆ. ಕೃಷಿ ಜಮೀನನ್ನು ನನ್ನ ಮಕ್ಕಳಿಗೆ ವಿಲೇ ಮಾಡುವ ಆಸೆ ನನ್ನದು. ಮನೆ ಹಳತ್ತಾಗಿದ್ದು ಅದನ್ನು ನಾನು ಬದುಕಿರುವಾಗಲೇ ಹೊಸ ಮನೆ ಕಟ್ಟುವ ಬಯಕೆ ನನ್ನ ಮಕ್ಕಳದ್ದಾಗಿದೆ. ಆದರೆ ಇ ಸ್ವತ್ತು ತಾಂತ್ರಿ ಸಮಸ್ಯೆಯಿಂದ ಕೃಷಿ ಭೂಮಿ ಆರ್‌ಟಿಸಿ ಫೆಚ್ ಆಗಿರುವುದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ. ನಾನು ಸಾಯುವ ಮುನ್ನವಾದರೂ ಇ ಸ್ವತ್ತು ಸಮಸ್ಯೆ ಪರಿಹರಿಸಿ ಎಂದು ಕಟ್ಟಿಂಗೇರಿ ಗ್ರಾಮದ ವೃದ್ಧೆಯೊಬ್ಬರು ಲಿಖಿತವಾಗಿ ಮುಖ್ಯಮಂತ್ರಿಗೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಬೆಳ್ಳೆ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ ಅಪರೂಪದ ಘಟನೆ ನಡೆದಿದೆ. ಇ ಸ್ವತ್ತು ಸಮಸ್ಯೆಯಿಂದ ಜನಸಾಮಾನ್ಯರು ಎಷ್ಟು ಮಟ್ಟದ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ. 


ಕೃಷಿ ಭೂಮಿಯಲ್ಲಿನ ಮನೆಗೆ ಇ ಸ್ವತ್ತು ನಮೂನೆ 11ಬಿ ದಾಖಲಿಸುವಾಗ ಭೂಮಿ ತಂತ್ರಾಂಶದಲ್ಲಿ ನಿವೇಶನ ದಾಖಲಾಗುತ್ತಿದ್ದು ನೋಂದಣಿ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಈ ವರೆಗೂ ಸಮಸ್ಯೆ ಪರಿಹಾರವಾಗಿಲ್ಲ. ಆದರೆ ಸ್ಥಳೀಯವಾಗಿ ಜಿಪಂ ಸಿಇಒ ಪ್ರತೀಕ್ ಬಾಯಾಲ್ ಅವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಜನರ ಸಮಸ್ಯೆ ಪರಿಹಾರಕ್ಕೆ ಸನಂ ಹಿಸ್ಸೆಯಲ್ಲಿ * ದಾಖಲಿಸಿ ಸಮಸ್ಯೆ ಪರಿಹಾರಕ್ಕೆ ಪಿಡಿಒಗಳಿಗೆ ವಿಸಿಯಲ್ಲಿ ಸೂಚನೆ ನೀಡಿದ್ದಾರೆ. ಆದರೆ ಇದಕ್ಕೆಲ್ಲ ಕ್ಯಾರೇ ಅನ್ನದ ಬೆಳ್ಳೆ ಗ್ರಾಪಂ ವೃದ್ಧೆಗೆ ಹಿಂಬರಹ ನೀಡಿದೆ. 


ಸರಕಾರಕ್ಕೆ ಪತ್ರ ಬರೆದು 4 ತಿಂಗಳು: ಆದರೂ ಕ್ರಮವಿಲ್ಲ

ಜಿಲ್ಲೆಯಲ್ಲಿನ ಇ ಸ್ವತ್ತಿನ ತಾಂತ್ರಿಕ ಸಮಸ್ಯೆ ಬಗ್ಗೆ ಮುಖ್ಯವಾಗಿ ನಮೂನೆ 11ಬಿಯಲ್ಲಿ ಆರ್‌ಟಿಸಿ ಫೆಚ್ ಆಗುತ್ತಿರುವ ಬಗ್ಗೆ ಜಿಪಂ ಸಿಇಒ ಅವರು 21.07.2026ರಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ ಆದರೆ ಪತ್ರ ಬರೆದು ೪ ತಿಂಗಳಾದರೂ ಸರಕಾರದಿಂದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 


ವಿಸಿಯಲ್ಲಿ ಸೂಚನೆ: ವಿಸಿ ಮೂಲಕ 11ಬಿ ಆರ್‌ಟಿಸಿ ಫೆಚ್ಚಿಂಗ್ ಸಮಸ್ಯೆ ತಾತ್ಕಾಲಿಕ ಪರಿಹಾರಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.

-ತಾಂತ್ರಿಕ ಅಧಿಕಾರಿ, ಜಿಪಂ 


Saturday, 31 October 2026

ಸರಕಾರಿ ಜಮೀನು ಒತ್ತುವರಿ: ಕಾಪು ತಾಲ್ಲೂಕಿನಲ್ಲಿ ಬೆಳ್ಳೆ - ಕಟ್ಟಿಂಗೇರಿಗೆ ಅಗ್ರಸ್ಥಾನ

 


ಮೂಡುಬೆಳ್ಳೆ: ಸರಕಾರಿ ಜಮೀನಿನ ರಕ್ಷಣೆಯ ಆದ್ಯ ಕರ್ತವ್ಯವನ್ನು ಹೊಂದಿರುವ ಕಂದಾಯ ಇಲಾಖೆಯೇ ಕೈಕಟ್ಟಿ ಕುಳಿತಿದ್ದು ಭೂ ಕಂದಾಯ ಕಾಯ್ದೆಯ ಕಂಡಿಕೆ 104 ಪುಸ್ತಕಕ್ಕೇ ಸೀಮಿತವಾಗಿದೆ. ಕಂದಾಯ ಇಲಾಖೆಯ ನಿರ್ಲಕ್ಷ್ಯ ಧೋರಣೆಯೇ ಸರಕಾರಿ ಜಮೀನು ಒತ್ತುವರಿದಾರರಿಗೆ ಶ್ರೀರಕ್ಷೆಯಾಗಿ ಪರಿಣಮಿಸಿದೆ. ಈ ಬಗ್ಗೆ ನಾಗರಿಕ ಸಮಿತಿ ಮೂಡುಬೆಳ್ಳೆ, ಸಂಯಮ ಮೂಡುಬೆಳ್ಳೆ, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲೆ ಜಂಟಿಯಾಗಿ ಹೋರಾಟಕ್ಕೆ ಮುಂದಾಗಿವೆ.

ಕಾಪು ತಾಲ್ಲೂಕಿನ ಬೆಳ್ಳೆ ಗ್ರಾಮದ ಸನಂ 318ರಲ್ಲಿ ಅನಾದಿಕಾಲದಿಂದ ಇದ್ದ ಕೆರೆಯಲ್ಲಿ [4.51 ಎಕ್ರೆ] ಸುಮಾರು ೩೫-೪೫ ಸೆಂಟ್ಸು ಸರಕಾರಿ ಕರೆಯನ್ನು ಒತ್ತುವರಿ ಮಾಡಿಕೊಂಡು ವರ್ಷಗಳೇ ಕಳೆದಿದ್ದರೂ, ಈ ಬಗ್ಗೆ ತಾಲ್ಲೂಕು ಭೂಮಾಪಕರು ಸರ್ವೆ ನಡೆಸಿ ವರದಿ ನೀಡಿದ್ದರೂ ಈ ವರೆಗೆ ಯಾವುದೇ ಕ್ರಮವಾಗಿಲ್ಲ. ಕಟ್ಟಿಂಗೇರಿ ಗ್ರಾಮದ ಸನಂ ೧೭೦ರಲ್ಲಿ ಪೊರಂಬೋಕು ಜಮೀನನ್ನು ವೈನ್‌ಶಾಪ್ ಒತ್ತುವರಿ ಮಾಡಿಕೊಂಡಿದ್ದರೂ, ಸರ್ವೆ ವರದಿಯಲ್ಲಿ ದೃಢಪಟ್ಟು ಒಂದೂವರೆ ವರ್ಷವಾಗುತ್ತಿದ್ದರೂ ಗ್ರಾಮ ಕೇಂದ್ರದ  ಮುಖ್ಯರಸ್ತೆಯಲ್ಲೇ ಇರುವ ಈ ಒತ್ತುವರಿ ತೆರವಾಗಿಲ್ಲ.

ಗೋಮಾಳವೇ ಗುಳುಂ!
ಕಟ್ಟಿಂಗೇರಿ ಗ್ರಾಮದಲ್ಲಿ ಸನಂ ೧೮೦ರಲ್ಲಿ ೩.೮೪ ಎಕ್ರೆ ಗೋಮಾಳವನ್ನೇ ಸ್ವಾಧೀನದಲ್ಲಿಟ್ಟುಕೊಂಡಿದ್ದರೂ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸನಂ ೧೩೩ರಲ್ಲಿ ದಲಿತರ ಸಂಪೂರ್ಣ ಹಕ್ಕಿನ ಸುಮಾರು ೫೦ ಸೆಂಟ್ಸು ಡಿಸಿ ಮನ್ನಾ ಜಮೀನು ಅನಧಿಕೃತವಾಗಿ ಮಂಜೂರಾತಿ ಮಾಡಿದ್ದರೂ ಈ ವರಗೆ ಕನಿಷ್ಟ ಅಳತೆಯೂ ಆಗಿಲ್ಲ. ಕಟ್ಟಿಂಗೇರಿ ಗ್ರಾಮದ ಸನಂ ೬ರಲ್ಲಿ ಸಾರಾಯಿ, ಶೇಂದಿ ಅಂಗಡಿಯ ಜಾಗ ಮೀಸಲಿರಿಸಿದ್ದು, ಇದೇ ಜಾಗವನ್ನು ಸುಮಾರು ೧೦೦ ವರ್ಷಗಳಿಂದ ಮನೆ ಕಟ್ಟಿ ವಾಸಿಸುತ್ತಿರುವ ಬಡ ದಲಿತ ಕುಟುಂಬಗಳಿಗೆ ಪೊರಂಬೋಕು ಬಂಡೆ ಕಾರಣ ಕೊಟ್ಟು ಹಕ್ಕುಪತ್ರ ನೀಡುತ್ತಿಲ್ಲ. ಈ ಬಗ್ಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಪ್ರತಿ ಮನೆಯ ನಕ್ಷೆ ತಯಾರಿಸಿ ಸರಕಾರಕ್ಕೆ ಸಲ್ಲಿಸಿ ಅನುಮತಿ ಕೇಳುವ ಕನಿಷ್ಟ ಕಾಳಜಿಯೂ ಆಡಳಿತಕ್ಕಿಲ್ಲ.  

ಬಡವರ ತೆಕ್ಕೆಗೆ ಸಿಗದ ಸರಕಾರಿ ಜಮೀನುಗಳು
ಸರಕಾರದಿಂದ ಪಕ್ಷಗಳ ಕಚೇರಿಗಳಿಗೆ, ಪಕ್ಷಗಳ ಬೆಂಬಲವಿರುವ ಸಂಘಟನೆಗಳಿಗೆ ನಗರ ವ್ಯಾಪ್ತಿಯ ಒಳಗಡೆಯೂ ಕಾನೂನು ಮೀರಿ ವಿಶೇಷ ರಿಯಾಯಿತಿಯಲ್ಲಿ ಸರಕಾರಿ ಜಮೀನುಗಳು ಮಂಜೂರಾಗುತ್ತಲೇ ಇವೆ. ಅಕ್ರಮ-ಸಕ್ರಮ, ಕುಮ್ಕಿ ಹೆಸರಿನಲ್ಲಿ ಇಂದಿಗೂ ಸರಕಾರಿ ಜಮೀನುಗಳು ಬಡವರ ತೆಕ್ಕೆಗೆ ಸಿಕ್ಕದೆ ಬಲಿಷ್ಠರ ತುಂಬಿದ ಹೊಟ್ಟೆಗೇ ಸೇರುತ್ತಿರುವುದು ದುರಂತ. ಡಿಸಿ ಮನ್ನಾ ಜಮೀನು ಸಾರ್ವಜನಿಕ ಉದ್ದೇಶಕ್ಕೆ, ರಸ್ತೆ, ಕೆರೆ, ಬಂಡೆ ಎಂದು ಕಳೆದುಹೋಗಿದ್ದು, ಇದರ ವಿರುದ್ಧ ಸಂಘಟಿತ ಹೋರಾಟ ನಡೆಯುತ್ತಲೇ ಇದೆ. ಈ ನೆಲದ ಮೂಲ ನಿವಾಸಿಗಳಿಗೆ ಅವರದ್ದೇ ಆದ ಜಮೀನಿನ ಹಕ್ಕಿನಿಂದ ವಂಚಿತಗೊಳಿಸುತ್ತಲೇ ಬರಲಾಗುತ್ತಿದೆ.
-ಸಂಜೀವ ಬಳ್ಕೂರು, ದಲಿತ ಹಕ್ಕುಗಳ ಸಮಿತಿ, ಜಿಲ್ಲಾಧ್ಯಕ್ಷರು

ಕರೆಗೆ ಸ್ಪಂದಿಸದ ಕಾಪು ಇಒ
ಸಂಘಟನೆಯಿಂದ ಕರೆ ಮಾಡಿದರೆ ಕಾಪು ತಾಪಂ ಇಒ ಉತ್ತರಿಸುವುದಿಲ್ಲ. ಸ್ಥಿರ ದೂರವಾಣಿ ಇಲ್ಲದ ತಾ.ಪಂ. ಒಂದನೇ ಮಾಳಿಗೆಯಲ್ಲಿದ್ದು ವೃದ್ಧರು, ವಿಶೇಷ ಚೇತನರಿಗೆ, ಇನ್ನಿತರ ಸಮಸ್ಯೆ ಇರುವವರಿಗೆ ಮೆಟ್ಟಿಲು ಹತ್ತಿ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾದರೆ ತಮ್ಮ ನೋವನ್ನು ಮೇಲಧಿಕಾರಿಗೆ ತಿಳಿಸುವುದು ಹೇಗೆ? ಇದಕ್ಕೆ ಉತ್ತರವಿಲ್ಲ. ಹಕ್ಕೇ ಇಲ್ಲದ ಜಮೀನಿನಲ್ಲಿ ಅರಣ್ಯ ಇಲಾಖೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಿ ಉಂಟು ಮಾಡುತ್ತಿದ್ದರೂ ಈ ವರೆಗೆ ಆಡಳಿತದ ಚುಕ್ಕಾಣಿ ಹಿಡಿದವರು ಸ್ಪಷ್ಟ ಸೂಚನೆ ನೀಡಿ ಕ್ರಮ ಕೈಗೊಂಡಿಲ್ಲ.
-ರಾಜೇಂದ್ರ ಶೆಟ್ಟಿ, ನಾಗರಿಕ ಸಮಿತಿ, ಮೂಡುಬೆಳ್ಳೆ

ತೆರವು ಮಾಡುವುದು ಯಾರು? ಪಿಡಿಒ ಪ್ರಶ್ನೆ
ಮೂಡುಬೆಳ್ಳೆಯಲ್ಲಿ ಒತ್ತುವರಿ ತೆರವು ಬಗ್ಗೆ ಎರಡು ಮೂರು ಪ್ರಕರಣಗಳಿವೆ. ಆದರೆ ಒತ್ತುವರಿ ಯಾರು ತೆರವು ಮಾಡುವುದು ಎಂಬ ಪ್ರಶ್ನೆ ಇದೆ. ಈ ಬಗ್ಗೆ ತಹಸಿಲ್ದಾರ ರಿಗೆ ಪತ್ರ ಬರೆಯಲು ೨೫.೧೧.೨೦೨೫ರಂದು ನಿರ್ಣಯಿಸಲಾಗಿದ್ದು ಪತ್ರ ಬರೆದಿರುವ ಬಗ್ಗೆ ಪರಿಶೀಲಿಸಲಾಗುವುದು.
-ಆಶಾಲತಾ, ಪಿಡಿಒ, ಬೆಳ್ಳೆ ಗ್ರಾಪಂ