*ದಣಿವರಿಯದ ಯುವ ಸಮಾಜಸೇವಕ
*ವೇಷ ಧರಿಸಿ ವರ್ಷಗಳಲ್ಲಿ 10 ಲಕ್ಷ ದೇಣಿಗೆ
*ಬೆಳಕು ಫ್ರೆಂಡ್ಸ್ ತಿರ್ಲಪಲ್ಕೆ, ಮೂಡುಬೆಳ್ಳೆ ತಂಡದಿಂದ ಸೇವೆ
ಮೂಡುಬೆಳ್ಳೆ: ವೃತ್ತಿಯಲ್ಲಿ ಎಲೆಕ್ಟ್ರಿಶನ್ ಆಗಿ ಹಗಲಿರುಳು ಕುಟುಂಬಕ್ಕಾಗಿ ದುಡಿಯುವ ಮೂಡುಬೆಳ್ಳೆ ತಿರ್ಲಪಲ್ಕೆಯ ನಟೇಶ್ ಅವರದ್ದು ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತವುಳ್ಳ ಅಂತಃಕರಣವಾಗಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಅವರು ಮೂಡುಬೆಳ್ಳೆಯ ಜನರ, ವಿಶೇಷವಾಗಿ ಹಿರಿಯ ನಾಗರಿಕರ, ವಿಶೇಷ ಚೇತನರ, ಅನಾರೋಗ್ಯ ಪೀಡಿತರ ತುರ್ತು ಅಗತ್ಯಕ್ಕೆ ಸ್ಪಂದಿಸಿ ಮನೆಮಾತಾಗಿದ್ದಾರೆ. ರಸ್ತೆಗಳಲ್ಲಿ ಮರಣಗುಂಡಿಗಳು ಕಾಣಸಿಕ್ಕಾಗ ಜನರು ನೆನಪಿಸಿಕೊಳ್ಳುವುದು ನಟೇಶರನ್ನೇ!
ಬೆಳಕು ತಂಡಕ್ಕೆ ೫ ವರ್ಷ: ಕಳೆದ 5 ವರ್ಷಗಳಿಂದ ಸಮಾನ ಮನಸ್ಕರೊಂದಿಗೆ ಸೇರಿ ಬೆಳಕು ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಚೌತಿ ಮತ್ತು ಅಷ್ಟಮಿ ಸಂದರ್ಭ ಸೃಜನಶೀಲ ವೇಷಗಳನ್ನು ಧರಿಸಿ ಅದರ ಮೂಲಕ ಸಂಗ್ರಹವಾದ ಹಣವನ್ನು ತೀರಾ ಅಶಕ್ತ ಕುಟುಂಬಗಳಿಗೆ ನೀಡಿದ ಹಿರಿಮೆ ಅವರದ್ದು. ಮೊದಲನೇ ವರ್ಷದದಲ್ಲಿ 1.59 ಲಕ್ಷ, 2ನೇ ವರ್ಷ 1.50 ಲಕ್ಷ, 3 ನೇ ವರ್ಷ 1.80 ಲಕ್ಷ, 4ನೇ ವರ್ಷ 2 ಲಕ್ಷ, 5ನೇ ವರ್ಷ 2.50 ಲಕ್ಷ ರೂ ಸಂಗ್ರಹಿಸಿ ಬಡವರಿಗೆ, ಅನಾರೋಗ್ಯ ಪೀಡಿತರಿಗೆ ನೀಡಿದ್ದಾರೆ.
ಸೃಜನಶೀಲ ವೇಷಗಳು ಡ್ರ್ಯಾಗನ್, ಮಾನ್ಸ್ಟರ್ ಹೀಗೆ ವಿವಿಧ ಸೃಜನಾತ್ಮಕ ವೇಷಗಳನ್ನು ಧರಿಸಿ ಮನೋರಂಜನೆಯ ಜತೆಗೆ ಮಾನವೀಯ ಸೇವೆಯನ್ನೂ ಅವರು ನೀಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೂ ನೆರವಾಗಿದ್ದಾರೆ.
ಏಕವ್ಯಕ್ತಿ ವೇಷ: ತಂಡವಿಲ್ಲದೆ ಒಬ್ಬರೇ ವೇಷ ಹಾಕಿ ಅಪಘಾತದ ಗಾಯಾಳುಗಳ ಚಿಕಿತ್ಸಗೆ ವೆಚ್ಚವನ್ನು [ಸುಮಾರು 2 ಲಕ್ಷ ರೂ.ಗೂ ಹೆಚ್ಚ] ಸಂಗ್ರಹಿಸಿ ನೀಡಿದ್ದಾರೆ. ಯುವಕರ ತಂಡವನ್ನೇ ಕಟ್ಟಿಕೊಂಡಿರುವ ನಟೇಶ ಮೂಡುಬೆಳ್ಳೆ ಬೆಳಕು ತಂಡವನ್ನು ಮುನ್ನಡೆಸುತ್ತಿದ್ದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಜನರಿಗೆ ಸಹಾಯ ಮಾಡುವ ಇಚ್ಛೆ ಹೊಂದಿದ್ದಾರೆ. ವೃದ್ಧಾಶ್ರಮ, ಅನಾಥಾಶ್ರಮಗಳಿಗೆ, ಬಾಲನಿಕೇತನಗಳಿಗೆ ಭೇಟಿ ನೀಡಿ ಅಲ್ಲಿ ಊಟದ ವ್ಯವಸ್ಥೆಯನ್ನು ಮಾಡಿ ಭೇಶ್ ಎನಿಸಿಕೊಂಡಿದ್ದಾರೆ.
-ಊರಿನಲ್ಲಿದ್ದು ಕೆಲಸ ಮಾಡುವ ನಾವು ನಮ್ಮ ಪ್ರತಿಭೆಯ ಮೂಲಕ ಏನನ್ನಾದರೂ ಸಾಧಿಸಿಕೊಂಡು ಅದರಿಂದ ಜನರಿಗೆ ವಿಶೇಷವಾಗಿ ಅಗತ್ಯವಿದ್ದವರಿಗೆ ನೆರವು ನೀಡುವುದು ನನ್ನ ಉದ್ದೇಶವಾಗಿದೆ.
-ನಟೇಶ ಮೂಡುಬೆಳ್ಳೆ






No comments:
Post a Comment