Monday, 2 November 2026

ಸಾಯುವ ಮೊದಲಾದರೂ ಇ ಸ್ವತ್ತು ಸರಿಪಡಿಸಿ!!: 83 ವರ್ಷದ ವೃದ್ಧೆಯ ಅಳಲು

ನನಗೀಗ 83 ವರ್ಷ ವಯಸ್ಸಾಗಿದ್ದು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನನ್ನ ಜೀವಿತಕಾಲದಲ್ಲಿಯೇ ನನ್ನ ಮನೆ. ಕೃಷಿ ಜಮೀನನ್ನು ನನ್ನ ಮಕ್ಕಳಿಗೆ ವಿಲೇ ಮಾಡುವ ಆಸೆ ನನ್ನದು. ಮನೆ ಹಳತ್ತಾಗಿದ್ದು ಅದನ್ನು ನಾನು ಬದುಕಿರುವಾಗಲೇ ಹೊಸ ಮನೆ ಕಟ್ಟುವ ಬಯಕೆ ನನ್ನ ಮಕ್ಕಳದ್ದಾಗಿದೆ. ಆದರೆ ಇ ಸ್ವತ್ತು ತಾಂತ್ರಿ ಸಮಸ್ಯೆಯಿಂದ ಕೃಷಿ ಭೂಮಿ ಆರ್‌ಟಿಸಿ ಫೆಚ್ ಆಗಿರುವುದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ. ನಾನು ಸಾಯುವ ಮುನ್ನವಾದರೂ ಇ ಸ್ವತ್ತು ಸಮಸ್ಯೆ ಪರಿಹರಿಸಿ ಎಂದು ಕಟ್ಟಿಂಗೇರಿ ಗ್ರಾಮದ ವೃದ್ಧೆಯೊಬ್ಬರು ಲಿಖಿತವಾಗಿ ಮುಖ್ಯಮಂತ್ರಿಗೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಬೆಳ್ಳೆ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ ಅಪರೂಪದ ಘಟನೆ ನಡೆದಿದೆ. ಇ ಸ್ವತ್ತು ಸಮಸ್ಯೆಯಿಂದ ಜನಸಾಮಾನ್ಯರು ಎಷ್ಟು ಮಟ್ಟದ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ. 


ಕೃಷಿ ಭೂಮಿಯಲ್ಲಿನ ಮನೆಗೆ ಇ ಸ್ವತ್ತು ನಮೂನೆ 11ಬಿ ದಾಖಲಿಸುವಾಗ ಭೂಮಿ ತಂತ್ರಾಂಶದಲ್ಲಿ ನಿವೇಶನ ದಾಖಲಾಗುತ್ತಿದ್ದು ನೋಂದಣಿ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಈ ವರೆಗೂ ಸಮಸ್ಯೆ ಪರಿಹಾರವಾಗಿಲ್ಲ. ಆದರೆ ಸ್ಥಳೀಯವಾಗಿ ಜಿಪಂ ಸಿಇಒ ಪ್ರತೀಕ್ ಬಾಯಾಲ್ ಅವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಜನರ ಸಮಸ್ಯೆ ಪರಿಹಾರಕ್ಕೆ ಸನಂ ಹಿಸ್ಸೆಯಲ್ಲಿ * ದಾಖಲಿಸಿ ಸಮಸ್ಯೆ ಪರಿಹಾರಕ್ಕೆ ಪಿಡಿಒಗಳಿಗೆ ವಿಸಿಯಲ್ಲಿ ಸೂಚನೆ ನೀಡಿದ್ದಾರೆ. ಆದರೆ ಇದಕ್ಕೆಲ್ಲ ಕ್ಯಾರೇ ಅನ್ನದ ಬೆಳ್ಳೆ ಗ್ರಾಪಂ ವೃದ್ಧೆಗೆ ಹಿಂಬರಹ ನೀಡಿದೆ. 


ಸರಕಾರಕ್ಕೆ ಪತ್ರ ಬರೆದು 4 ತಿಂಗಳು: ಆದರೂ ಕ್ರಮವಿಲ್ಲ

ಜಿಲ್ಲೆಯಲ್ಲಿನ ಇ ಸ್ವತ್ತಿನ ತಾಂತ್ರಿಕ ಸಮಸ್ಯೆ ಬಗ್ಗೆ ಮುಖ್ಯವಾಗಿ ನಮೂನೆ 11ಬಿಯಲ್ಲಿ ಆರ್‌ಟಿಸಿ ಫೆಚ್ ಆಗುತ್ತಿರುವ ಬಗ್ಗೆ ಜಿಪಂ ಸಿಇಒ ಅವರು 21.07.2026ರಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ ಆದರೆ ಪತ್ರ ಬರೆದು ೪ ತಿಂಗಳಾದರೂ ಸರಕಾರದಿಂದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 


ವಿಸಿಯಲ್ಲಿ ಸೂಚನೆ: ವಿಸಿ ಮೂಲಕ 11ಬಿ ಆರ್‌ಟಿಸಿ ಫೆಚ್ಚಿಂಗ್ ಸಮಸ್ಯೆ ತಾತ್ಕಾಲಿಕ ಪರಿಹಾರಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.

-ತಾಂತ್ರಿಕ ಅಧಿಕಾರಿ, ಜಿಪಂ 


No comments:

Post a Comment