ಮೂಡುಬೆಳ್ಳೆ: ಸರಕಾರಿ ಜಮೀನಿನ ರಕ್ಷಣೆಯ ಆದ್ಯ ಕರ್ತವ್ಯವನ್ನು ಹೊಂದಿರುವ ಕಂದಾಯ ಇಲಾಖೆಯೇ ಕೈಕಟ್ಟಿ ಕುಳಿತಿದ್ದು ಭೂ ಕಂದಾಯ ಕಾಯ್ದೆಯ ಕಂಡಿಕೆ 104 ಪುಸ್ತಕಕ್ಕೇ ಸೀಮಿತವಾಗಿದೆ. ಕಂದಾಯ ಇಲಾಖೆಯ ನಿರ್ಲಕ್ಷ್ಯ ಧೋರಣೆಯೇ ಸರಕಾರಿ ಜಮೀನು ಒತ್ತುವರಿದಾರರಿಗೆ ಶ್ರೀರಕ್ಷೆಯಾಗಿ ಪರಿಣಮಿಸಿದೆ. ಈ ಬಗ್ಗೆ ನಾಗರಿಕ ಸಮಿತಿ ಮೂಡುಬೆಳ್ಳೆ, ಸಂಯಮ ಮೂಡುಬೆಳ್ಳೆ, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲೆ ಜಂಟಿಯಾಗಿ ಹೋರಾಟಕ್ಕೆ ಮುಂದಾಗಿವೆ.
ಕಾಪು ತಾಲ್ಲೂಕಿನ ಬೆಳ್ಳೆ ಗ್ರಾಮದ ಸನಂ 318ರಲ್ಲಿ ಅನಾದಿಕಾಲದಿಂದ ಇದ್ದ ಕೆರೆಯಲ್ಲಿ [4.51 ಎಕ್ರೆ] ಸುಮಾರು ೩೫-೪೫ ಸೆಂಟ್ಸು ಸರಕಾರಿ ಕರೆಯನ್ನು ಒತ್ತುವರಿ ಮಾಡಿಕೊಂಡು ವರ್ಷಗಳೇ ಕಳೆದಿದ್ದರೂ, ಈ ಬಗ್ಗೆ ತಾಲ್ಲೂಕು ಭೂಮಾಪಕರು ಸರ್ವೆ ನಡೆಸಿ ವರದಿ ನೀಡಿದ್ದರೂ ಈ ವರೆಗೆ ಯಾವುದೇ ಕ್ರಮವಾಗಿಲ್ಲ. ಕಟ್ಟಿಂಗೇರಿ ಗ್ರಾಮದ ಸನಂ ೧೭೦ರಲ್ಲಿ ಪೊರಂಬೋಕು ಜಮೀನನ್ನು ವೈನ್ಶಾಪ್ ಒತ್ತುವರಿ ಮಾಡಿಕೊಂಡಿದ್ದರೂ, ಸರ್ವೆ ವರದಿಯಲ್ಲಿ ದೃಢಪಟ್ಟು ಒಂದೂವರೆ ವರ್ಷವಾಗುತ್ತಿದ್ದರೂ ಗ್ರಾಮ ಕೇಂದ್ರದ ಮುಖ್ಯರಸ್ತೆಯಲ್ಲೇ ಇರುವ ಈ ಒತ್ತುವರಿ ತೆರವಾಗಿಲ್ಲ.
ಗೋಮಾಳವೇ ಗುಳುಂ!
ಕಟ್ಟಿಂಗೇರಿ ಗ್ರಾಮದಲ್ಲಿ ಸನಂ ೧೮೦ರಲ್ಲಿ ೩.೮೪ ಎಕ್ರೆ ಗೋಮಾಳವನ್ನೇ ಸ್ವಾಧೀನದಲ್ಲಿಟ್ಟುಕೊಂಡಿದ್ದರೂ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸನಂ ೧೩೩ರಲ್ಲಿ ದಲಿತರ ಸಂಪೂರ್ಣ ಹಕ್ಕಿನ ಸುಮಾರು ೫೦ ಸೆಂಟ್ಸು ಡಿಸಿ ಮನ್ನಾ ಜಮೀನು ಅನಧಿಕೃತವಾಗಿ ಮಂಜೂರಾತಿ ಮಾಡಿದ್ದರೂ ಈ ವರಗೆ ಕನಿಷ್ಟ ಅಳತೆಯೂ ಆಗಿಲ್ಲ. ಕಟ್ಟಿಂಗೇರಿ ಗ್ರಾಮದ ಸನಂ ೬ರಲ್ಲಿ ಸಾರಾಯಿ, ಶೇಂದಿ ಅಂಗಡಿಯ ಜಾಗ ಮೀಸಲಿರಿಸಿದ್ದು, ಇದೇ ಜಾಗವನ್ನು ಸುಮಾರು ೧೦೦ ವರ್ಷಗಳಿಂದ ಮನೆ ಕಟ್ಟಿ ವಾಸಿಸುತ್ತಿರುವ ಬಡ ದಲಿತ ಕುಟುಂಬಗಳಿಗೆ ಪೊರಂಬೋಕು ಬಂಡೆ ಕಾರಣ ಕೊಟ್ಟು ಹಕ್ಕುಪತ್ರ ನೀಡುತ್ತಿಲ್ಲ. ಈ ಬಗ್ಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಪ್ರತಿ ಮನೆಯ ನಕ್ಷೆ ತಯಾರಿಸಿ ಸರಕಾರಕ್ಕೆ ಸಲ್ಲಿಸಿ ಅನುಮತಿ ಕೇಳುವ ಕನಿಷ್ಟ ಕಾಳಜಿಯೂ ಆಡಳಿತಕ್ಕಿಲ್ಲ.
ಬಡವರ ತೆಕ್ಕೆಗೆ ಸಿಗದ ಸರಕಾರಿ ಜಮೀನುಗಳು
ಸರಕಾರದಿಂದ ಪಕ್ಷಗಳ ಕಚೇರಿಗಳಿಗೆ, ಪಕ್ಷಗಳ ಬೆಂಬಲವಿರುವ ಸಂಘಟನೆಗಳಿಗೆ ನಗರ ವ್ಯಾಪ್ತಿಯ ಒಳಗಡೆಯೂ ಕಾನೂನು ಮೀರಿ ವಿಶೇಷ ರಿಯಾಯಿತಿಯಲ್ಲಿ ಸರಕಾರಿ ಜಮೀನುಗಳು ಮಂಜೂರಾಗುತ್ತಲೇ ಇವೆ. ಅಕ್ರಮ-ಸಕ್ರಮ, ಕುಮ್ಕಿ ಹೆಸರಿನಲ್ಲಿ ಇಂದಿಗೂ ಸರಕಾರಿ ಜಮೀನುಗಳು ಬಡವರ ತೆಕ್ಕೆಗೆ ಸಿಕ್ಕದೆ ಬಲಿಷ್ಠರ ತುಂಬಿದ ಹೊಟ್ಟೆಗೇ ಸೇರುತ್ತಿರುವುದು ದುರಂತ. ಡಿಸಿ ಮನ್ನಾ ಜಮೀನು ಸಾರ್ವಜನಿಕ ಉದ್ದೇಶಕ್ಕೆ, ರಸ್ತೆ, ಕೆರೆ, ಬಂಡೆ ಎಂದು ಕಳೆದುಹೋಗಿದ್ದು, ಇದರ ವಿರುದ್ಧ ಸಂಘಟಿತ ಹೋರಾಟ ನಡೆಯುತ್ತಲೇ ಇದೆ. ಈ ನೆಲದ ಮೂಲ ನಿವಾಸಿಗಳಿಗೆ ಅವರದ್ದೇ ಆದ ಜಮೀನಿನ ಹಕ್ಕಿನಿಂದ ವಂಚಿತಗೊಳಿಸುತ್ತಲೇ ಬರಲಾಗುತ್ತಿದೆ.
-ಸಂಜೀವ ಬಳ್ಕೂರು, ದಲಿತ ಹಕ್ಕುಗಳ ಸಮಿತಿ, ಜಿಲ್ಲಾಧ್ಯಕ್ಷರು
ಕರೆಗೆ ಸ್ಪಂದಿಸದ ಕಾಪು ಇಒ
ಸಂಘಟನೆಯಿಂದ ಕರೆ ಮಾಡಿದರೆ ಕಾಪು ತಾಪಂ ಇಒ ಉತ್ತರಿಸುವುದಿಲ್ಲ. ಸ್ಥಿರ ದೂರವಾಣಿ ಇಲ್ಲದ ತಾ.ಪಂ. ಒಂದನೇ ಮಾಳಿಗೆಯಲ್ಲಿದ್ದು ವೃದ್ಧರು, ವಿಶೇಷ ಚೇತನರಿಗೆ, ಇನ್ನಿತರ ಸಮಸ್ಯೆ ಇರುವವರಿಗೆ ಮೆಟ್ಟಿಲು ಹತ್ತಿ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾದರೆ ತಮ್ಮ ನೋವನ್ನು ಮೇಲಧಿಕಾರಿಗೆ ತಿಳಿಸುವುದು ಹೇಗೆ? ಇದಕ್ಕೆ ಉತ್ತರವಿಲ್ಲ. ಹಕ್ಕೇ ಇಲ್ಲದ ಜಮೀನಿನಲ್ಲಿ ಅರಣ್ಯ ಇಲಾಖೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಿ ಉಂಟು ಮಾಡುತ್ತಿದ್ದರೂ ಈ ವರೆಗೆ ಆಡಳಿತದ ಚುಕ್ಕಾಣಿ ಹಿಡಿದವರು ಸ್ಪಷ್ಟ ಸೂಚನೆ ನೀಡಿ ಕ್ರಮ ಕೈಗೊಂಡಿಲ್ಲ.
-ರಾಜೇಂದ್ರ ಶೆಟ್ಟಿ, ನಾಗರಿಕ ಸಮಿತಿ, ಮೂಡುಬೆಳ್ಳೆ
ತೆರವು ಮಾಡುವುದು ಯಾರು? ಪಿಡಿಒ ಪ್ರಶ್ನೆ
ಮೂಡುಬೆಳ್ಳೆಯಲ್ಲಿ ಒತ್ತುವರಿ ತೆರವು ಬಗ್ಗೆ ಎರಡು ಮೂರು ಪ್ರಕರಣಗಳಿವೆ. ಆದರೆ ಒತ್ತುವರಿ ಯಾರು ತೆರವು ಮಾಡುವುದು ಎಂಬ ಪ್ರಶ್ನೆ ಇದೆ. ಈ ಬಗ್ಗೆ ತಹಸಿಲ್ದಾರ ರಿಗೆ ಪತ್ರ ಬರೆಯಲು ೨೫.೧೧.೨೦೨೫ರಂದು ನಿರ್ಣಯಿಸಲಾಗಿದ್ದು ಪತ್ರ ಬರೆದಿರುವ ಬಗ್ಗೆ ಪರಿಶೀಲಿಸಲಾಗುವುದು.
-ಆಶಾಲತಾ, ಪಿಡಿಒ, ಬೆಳ್ಳೆ ಗ್ರಾಪಂ

No comments:
Post a Comment