Monday 10 December 2018

ಮೂಡುಬೆಳ್ಳೆಯ ಮುತ್ತು ‘ಮುದ್ದು ಮೂಡುಬೆಳ್ಳೆ’


ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪರಿಚಯ


ದ್ವೀಪದಂತಿದ್ದ ಮೂಡುಬೆಳ್ಳೆಯ ಹೆಸರನ್ನು ಜಗದಗಲಕ್ಕೆ ಪರಿಚಯಿಸಿದವರಲ್ಲಿ ಮುದ್ದು ಮೂಡುಬೆಳ್ಳೆ ಅವರು ಅಗ್ರಮಾನ್ಯರು. ಕೀರ್ತಿಯ ಶಿಖರಕ್ಕೇರಿದರೂ ಹುಟ್ಟೂರಿನ ಮಮಕಾರದಿಂದ ಒಂದಿನಿತೂ ವಿಚಲಿತರಾಗದ ಅವರು ತಮ್ಮ ಬರೆಹಗಳಲ್ಲೂ ಸಾಧ್ಯವಾದೆಡೆ ಊರಿನ ಘಮವನ್ನು ಪಸರಿಸಿದ್ದಾರೆ. ಮೇ 07, 1954ರಂದು ಕಟ್ಟಿಂಗೇರಿ ಗ್ರಾಮದ ಕಪ್ಪಂದಕರ್ಯದಲ್ಲಿ ಜನಿಸಿದ ಅವರು ಅಂದು ಊರಾದ ಮೂಡುಬೆಳ್ಳೆಯ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿದ್ದರು. ಇಂದು ಅವರ ಹೆಸರಿನಿಂದ ಮೂಡುಬೆಳ್ಳೆಗೂ ಹೆಸರು ಬರುವಂತಾಗಿದೆ. ಮೂಡುಬೆಳ್ಳೆಯವರಾ? ಮುದ್ದು ಮೂಡುಬೆಳ್ಳೆಯ ಊರಿನವರಾ ಎಂದಾಗ ಜಾಗೃತಿಯಾಗುವ ನಮ್ಮ ಊರ ಅಭಿಮಾನವನ್ನು ವಿವರಿಸಲಸಾಧ್ಯ.  

ಮೂಡುಬೆಳ್ಳೆ ಹಾಗೂ ಉಡುಪಿಯಲ್ಲಿ (ಪದವಿ) ಶಿಕ್ಷಣದ ಬಳಿಕ ಮೈಸೂರು ವಿಶ್ವವಿದ್ಯಾನಿಲಯದಿಂದ (ಅಂಚೆ ತೆರಪಿನಲ್ಲಿ) ಎಂ.. ಕನ್ನಡ, ಎಂ.. ಸಮಾಜಶಾಸ್ತ್ರ, ಸ್ನಾತಕೋತ್ತರ ಡಿಪ್ಲೊಮಾ (ಕೊಂಕಣಿ) ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿರುವ ಅವರು, 1972-75ರಲ್ಲಿ ಮುಂಬಯಿಯಲ್ಲಿ ಖಾಸಗಿ ನೌಕರಿ ಮಾಡಿದರು. 1976-85ರ ವರೆಗೆ ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗ (ಮೂಡುಬೆಳ್ಳೆಯಲ್ಲೇ ಮೊದಲು). 1985ರಿಂದ ಮಂಗಳೂರು ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರೂಪಕರಾಗಿದ್ದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿ ನಿವೃತ್ತಿ ಹೊಂದಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅವರು, ಹುಟ್ಟೂರಿನಲ್ಲಿಯೂ ಸಾಹಿತ್ಯ ಸಂಸ್ಕೃತಿ ವೇದಿಕೆಯನ್ನು ಆರಂಭಿಸಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸಿದ್ದಾರೆ.

ತನ್ನ 12-13ರ ಹರೆಯದಲ್ಲಿ (1968) ಪ್ರಥಮ ಕಥೆ-ಕವನ ಪ್ರಕಟಿಸಿದ್ದ ಕಥೆಗಾರ, ಕವಿ, ಗಾಯಕ, ನಟ, ನಿರ್ದೇಶಕ, ಜಾನಪದ - ಇತಿಹಾಸ ಅಧ್ಯಯನಕಾರ ಮುದ್ದು ಮೂಡುಬೆಳ್ಳೆ ಕಳೆದ 50 ವರ್ಷಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿದ್ದು ಕನ್ನಡ, ತುಳು ಭಾಷೆಗಳಲ್ಲಿ 30 ಕೃತಿಗಳನ್ನು ಬರೆದಿದ್ದಾರೆ.

50ಕ್ಕೂ ಮಿಕ್ಕ ಕೃತಿಗಳ ಸಂಪಾದಕ ಸಮಿತಿಯಲ್ಲಿ ದುಡಿದಿದ್ದಾರೆ. 'ನಾಡು ನುಡಿಯಿದೊಂದು ಬಗೆ', 'ಕಾಂತಬಾರೆ ಬೂದಬಾರೆ', 'ತುಳುನಾಡಿನ ಜಾನಪದ ವಾದ್ಯಗಳು', 'ತುಳು ರಂಗಭೂಮಿ ಅಧ್ಯಯನ' ಶ್ರೀಗುರು ನಾರಾಯಣ ಕೃತಿ (ಹಾಗೂ ಸಾಕ್ಷ್ಯರೂಪಕ ಸಿ.ಡಿ.) - ಮುಂತಾದವು ಇವರ ಪ್ರಮುಖ ಅಧ್ಯಯನ ಕೃತಿಗಳು. ಕೊಂಕಣಿ ಹಾಗೂ ಇಂಗ್ಲಿಷ್ನಲ್ಲೂ ಬರೆದಿದ್ದಾರೆ. ಹಲವು ಸ್ಮರಣ ಸಂಪುಟಗಳ ಸಂಪಾದಕರು, ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರಗೋಷ್ಠಿಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ, ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ 7 ಕಥಾ ಸಂಕಲನಗಳು, ನಾಲ್ಕು ಕವನ ಸಂಕಲನಗಳು, 3 ಕಾದಂಬರಿ, ಹಾಗೂ 15 ಇತರ ಪ್ರಕಾರದ ಕೃತಿಗಳ ಲೇಖಕರು.

1976-96ರ ನಡುವೆ ಮಾಸ್ತಿ ಕಥಾ ಪುರಸ್ಕಾರ ಸೇರಿದಂತೆ 9 ಬಾರಿ ಕಥೆಗಳಿಗೆ ಬಹುಮಾನಿತರು. 1978ರಲ್ಲಿ ಕೋಟೇಶ್ವರದ ಚೇತನಾ ಕಾವ್ಯ ಪ್ರಶಸ್ತಿ, 2004ರಲ್ಲಿ ಗೊರೂರು ಪ್ರಶಸ್ತಿ, 1994ರ 'ಒಸಯೊ' ತುಳು ಕಥಾ ಸಂಕಲನ, 1999ರ 'ಪೂವರಿ' ಜಾನಪದ ಕೃತಿ, 2009ರ 'ಕನ್ನೆಗ' ತುಳು ಕವನ ಸಂಕಲನ - ಇವುಗಳು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನ ಗಳಿಸಿವೆ. 2004ರಲ್ಲಿ 'ಸತ್ಯದ ಸುರಿಯ ಸಾಯದ ಪಗರಿ' ತುಳು ಕಾದಂಬರಿಗೆ ಪಣಿಯಾಡಿ ಸಾಹಿತ್ಯ ಪ್ರಶಸ್ತಿ, 2012ನೇ ಸಾಲಿನಲ್ಲಿ 'ಕಾಂತಬಾರೆ ಬೂದಬಾರೆ' ಜಾನಪದ ಅಧ್ಯಯನ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿ ಪಡೆದಿರುವರು. 2009ರಲ್ಲಿ ಆಕಾಶವಾಣಿಯ ರಾಜ್ಯಮಟ್ಟದ (ಪ್ರಥಮ) ಪ್ರಶಸ್ತಿ, 2012ನೇ ಸಾಲಿನ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು. 3 ಕೃತಿಗಳು ಮಂಗಳೂರು ಹಾಗೂ ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಗೆ ಪಠ್ಯವಾಗಿವೆ. 'ಆತ್ಮಶಕ್ತಿ' ತ್ರೈಮಾಸಿಕ ಪತ್ರಿಕೆಯ ಉಪಸಂಪಾದಕ. 'ಕೋಟಿಚೆನ್ನಯ ಪಾಡ್ದನ ಸಂಪುಟ' ಮತ್ತು .. ಜಿಲ್ಲಾಡಳಿತದ 'ಮಂಗಳೂರು ದರ್ಶನ' ಗ್ರಂಥ ಸಂಪುಟಗಳ ಸಂಪಾದಕೀಯ ಮಂಡಳಿ ಸದಸ್ಯ. ವಚನ ಸಂಪುಟ ಹಾಗೂ ಕನಕಕಾವ್ಯ ಸಂಪುಟಗಳ ಅನುವಾದಕರಲ್ಲೊಬ್ಬರು.

ಶ್ರೀಯುತರು ಚೊಚ್ಚಲ ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ.


No comments:

Post a Comment