Friday 7 December 2018

ಅಂಬೇಡ್ಕರ್ ಸರ್ವರ ಮಹಾಗುರು: ಶಿವಾಜಿ ಸುವರ್ಣ

ಮೂಡುಬೆಳ್ಳೆ: ಅಂಬೇಡ್ಕರ್ ಟ್ರೋಫಿ-2018 ಉದ್ಘಾಟನೆ


ಶಿರ್ವ: ಸಮಾನತೆ, ಸಹೋದರತೆಯನ್ನು ಸಾರಿದ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರು ಸರ್ವ ಜನಾಂಗದವರಿಗೆ ದಾರಿದೀಪವಾದ ಮಹಾಗುರು ಎಂದು ಕೆಪಿಸಿಸಿ ರಾಜ್ಯ ಕಾರ್‍ಯದರ್ಶಿ, ಬೆಳ್ಳೆ ಸವ್ಯ ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ ಹೇಳಿದರು.

ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗ್ರಾಮ ಶಾಖೆ ತಿರ್ಲಪಲ್ಕೆ ಆಯೋಜಿಸಿದ ಆರೋಗ್ಯ ಹಾಗೂ ಶೈಕ್ಷಣಿಕ ನಿಧಿ ಸಹಾಯಾರ್ಥ ಜಿಲ್ಲಾ ಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾಟ ಅಂಬೇಡ್ಕರ್ ಟ್ರೋಫಿ ಉದ್ಘಾಟನಾ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಅಂಬೇಡ್ಕರ್, ನಾರಾಯಣಗುರು ಮತ್ತಿತರರು ಮಾನವತೆಯ ಧರ್ಮವನ್ನು ಭೋದಿಸಿದ ಮಹಾತ್ಮರಾಗಿದ್ದಾರೆ. ಅವರ್‍ಯಾರು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾದವರಲ್ಲ. ಅವರ ಪ್ರೇರಣೆಯಲ್ಲಿ ನಾವೆಲ್ಲರು ಮುನ್ನಡೆದಾಗ ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗುತ್ತದೆ ಎಂದು ಅವರು ಹೇಳಿದರು. 

ಮೂಡುಬೆಳ್ಳೆ ಚರ್ಚ್ ಸಹಾಯಕ ಧರ್ಮಗುರು ವಂ| ಲಾರೆನ್ಸ್ ಕುಟಿನ್ಹಾ ಕಾರ್‍ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.  

ಉಡುಪಿ ತಾಪಂ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಮಾತನಾಡಿ, ಹಲವು ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ದಲಿತ ಸಂಘರ್ಷ ಸಮಿತಿಯನ್ನು ಅಭಿನಂದಿಸಿ, ಅಂಬೇಡ್ಕರ್ ಅವರ ಮೂಲ ಮಂತ್ರವಾದ ಶಿಕ್ಷಣ ಹಾಗೂ ಅಭಿವೃದ್ಧಿಗೆ ಒತ್ತು ನೀಡಿ ಕಾರ್ಯನಿರ್ವಹಿಸೋಣ ಎಂದರು. 

ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ ಮಾತನಾಡಿದರು. ಸಮಿತಿಯ ಅಧ್ಯಕ್ಷ ರಾಘವ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಬೆಳ್ಳೆ ಗ್ರಾಪಂ ಸದಸ್ಯ ಸುಧಾಕರ ಪೂಜಾರಿ ಉಪಸ್ಥಿತರಿದ್ದರು.

ಕ್ರೀಡಾ ಕಾರ್ಯದರ್ಶಿ ಎಂ. ರಮೇಶ್ ಅಂಬೇಡ್ಕರ್ ಗೀತೆ ಹಾಡಿದರು. ಸಮಿತಿ ಕೋಶಾಧಿಕಾರಿ ಜಯಕರ್ ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಂದ್ರನಾಥ್ ಪ್ರಸ್ತಾವನೆಗೈದರು. ರಘುನಾಥ್, ಶಂಕರ್ ಕಾರ್ಯಕ್ರಮ ನಿರೂಪಿಸಿದರು. 


No comments:

Post a Comment